ಕುಶಾಲನಗರ,ಜೂ.೧೮: ಪಾಕೃತಿಕ ವಿಕೋಪ ಎದುರಿಸುವ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್, ಅಗ್ನಿ ಶಾಮಕ ಮತ್ತು ತುರ್ತು ಸೇವೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳ ಮೂಲಕ ಹಾರಂಗಿ ಜಲಾಶಯದಲ್ಲಿ ಅಣುಕು ಪ್ರದರ್ಶನ ನಡೆಸಲಾಯಿತು.

ಎನ್‌ಡಿಆರ್‌ಎಫ್ ಅಧಿಕಾರಿ ಬಸು ವಿಶ್ವಾಸ್, ಅಗ್ನಿ ಶಾಮಕ ಮತ್ತು ತುರ್ತು ಸೇವೆಯ ಜಿಲ್ಲಾಧಿಕಾರಿ ಚಂದನ್ ನೇತೃತ್ವದಲ್ಲಿ ಸಿಬ್ಬಂದಿಗಳು ಜಲಾಶಯದಲ್ಲಿ ೪ ವಿಧದ ಅಣುಕು ಚಟುವಟಿಕೆಗಳನ್ನು ನಡೆಸಿದರು. ಜಿಲ್ಲಾಧಿಕಾರಿ ಚಾರುಲತ ಸೋಮಲ್ , ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಉಪಸ್ಥಿತಿಯಲ್ಲಿ ನಡೆದ ಅಣುಕು ಕಾರ್ಯಕ್ರಮದಲ್ಲಿ ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಯನ್ನು ರಕ್ಷಿಸುವುದು, ನದಿಯಲ್ಲಿ ಮುಳುಗಿದ ಮೃತದೇಹಗಳನ್ನು ಹೊರತೆಗೆ ಯುವುದು, ೨ ಗ್ರಾಮಗಳ ನಡುವೆ ಸಿಲುಕಿದ ಜನರನ್ನು ಹಗ್ಗದ ಮೂಲಕ ಸ್ಥಳಾಂತರಿಸುವ ಕಾರ್ಯಾಚರಣೆ, ಪ್ರವಾಹಕ್ಕೆ ಸಿಲುಕಿದ ಪ್ರಾಣಿಗಳ ರಕ್ಷಣೆ ಮುಂತಾದ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಯಾಂತ್ರಿಕೃತ ಬೋಟ್ ಗಳ ಮೂಲಕ ಜನರನ್ನು ಜಲಾಶಯದಲ್ಲಿ ಕರೆದೊಯ್ಯುವ ಮೂಲಕ ಸ್ಥಳೀಯರಿಗೆ ಧೈರ್ಯ ತುಂಬುವ ಕೆಲಸ ನಡೆಯಿತು. ಖುದ್ದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಸೇರಿದಂತೆ ಅಧಿಕಾರಿಗಳು ಜಲಾಶಯದಲ್ಲಿ ಯಾಂತ್ರೀಕೃತ ಬೋಟ್‌ಗಳ ಮೂಲಕ ತೆರಳಿದರು.

ಈ ಸಂದರ್ಭ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರಾ, ಡಿಡಿಎಲ್‌ಆರ್ ಶ್ರೀನಿವಾಸ್, ತಾಲೂಕು ತಹಶೀಲ್ದಾರ್ ಗೋವಿಂದರಾಜು, ವಾರ್ತಾಧಿಕಾರಿ ಚಿನ್ನಸ್ವಾಮಿ, ಡಿ ವೈ ಎಸ್ ಪಿ ಶೈಲೇಂದ್ರ ಕುಮಾರ್, ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿ ಸಿದ್ಧರಾಜು ಮತ್ತಿತರ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

- ಚಂದ್ರ ಮೋಹನ್