ಮಡಿಕೇರಿ, ಜೂ. ೧೮: ಕೊಡಗು ಜಿಲ್ಲೆಯಾದ್ಯಂತ ಮಳೆ - ಗಾಳಿಯ ಆರ್ಭಟ ಮುಂದುವರಿಯುತ್ತಿದೆ. ತಾ. ೧೮ ರಂದು ಬೆಳಿಗ್ಗೆ ೧೦ರ ಬಳಿಕ ಒಂದಷ್ಟು ಮಳೆ ಇಳಿಮುಖವಾದಂತೆ ಕಂಡು ಬಂದಿತಾದರೂ ತಾ. ೧೭ರ ಗುರುವಾರದಂದು ಜಿಲ್ಲೆಯಲ್ಲಿ ಅಧಿಕ ಮಳೆಯಾಗಿದೆ. ಭಾರೀ ಗಾಳಿ - ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಈ ಪರಿಸ್ಥಿತಿಯಿಂದ ಹಲವಾರು ಗ್ರಾಮೀಣ ಪ್ರದೇಶಗಳು ಕಳೆದ ಮೂರು - ನಾಲ್ಕು ದಿನಗಳಿಂದಲೂ ಕಾರ್ಗತ್ತಲ್ಲಿನಲ್ಲೇ ಉಳಿದಿವೆ.

ವಿದ್ಯುತ್ ಪೂರೈಕೆ ಸ್ಥಗಿತವಾಗಿರುವ ಹಿನ್ನೆಲೆಯಿಂದ ದೂರವಾಣಿ ಸಂಪರ್ಕವೂ ಇಲ್ಲದಂತಾಗಿದ್ದು, ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಗೋಣಿಕೊಪ್ಪಲು, ಶ್ರೀಮಂಗಲ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಅಧಿಕ ಸಮಸ್ಯೆ ಎದುರಾಗಿದ್ದು, ಸೆಸ್ಕ್ನ ಮೂಲಕ ಇದನ್ನು ಸರಿಪಡಿಸುವ ಕೆಲಸ ಬಿರುಸಿನಿಂದ ಸಾಗಿದೆ. ಗುರುವಾರ ದಿನವಿಡೀ ಹಾಗೂ ರಾತ್ರಿ ಕೂಡ ಸುರಿದ ನಿರಂತರ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ.

ಇದರೊAದಿಗೆ ಕಾವೇರಿ ಹಾಗೂ ಲಕ್ಷö್ಮಣ ತೀರ್ಥ ನದಿಗಳು ಹರಿಯುವ ಮಾರ್ಗದಲ್ಲಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಮತ್ತೆ ಮಳೆ ಇದೇ ರೀತಿ ಮುಂದುವರಿದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿನ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಬೀಡು ಬಟ್ಟಿರುವ ಪ್ರಾಕೃತಿಕ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಹಾಗೂ ಪೊಲೀಸ್ (ಮೊದಲ ಪುಟದಿಂದ) ಇಲಾಖೆ ಹಾಗೂ ಅಗ್ನಿಶಾಮಕದಳದ ಮೂಲಕ ಅಗತ್ಯ ಸಿದ್ಧತೆಯೊಂದಿಗೆ ಸನ್ನದ್ಧವಾಗಿರಲು ಇಂದು ಜಿಲ್ಲೆಯಲ್ಲಿ ಈ ತಂಡಗಳು ತಾಲೀಮು ನಡೆಸಿವೆ.

ಭಾಗಮಂಡಲಕ್ಕೆ ಭಾರೀ ಮಳೆ

ಭಾಗಮಂಡಲ ವಿಭಾಗಕ್ಕೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೮.೨೯ ಇಂಚಿನಷ್ಟು ಭಾರೀ ಮಳೆಯಾಗಿದೆ. ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶ ಹಾಗೂ ಬೆಟ್ಟಗಳ ತಪ್ಪಲು ಹಾಗೂ ಕೇರಳ ಗಡಿ ಪ್ರದೇಶಗಳಲ್ಲಿ ಕೂಡ ಭಾರೀ ಮಳೆಯಾಗಿರುವ ಕುರಿತು ವರದಿಯಾಗಿದೆ. ಪ್ರಸ್ತುತ ಹಾರಂಗಿ ಜಲಾಶಯಕ್ಕೆ ೧೧೮೬ ಕ್ಯೂಸೆಕ್ಸ್ನಷ್ಟು ನೀರು ಹರಿದು ಬರುತ್ತಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿಯೂ ನಿನ್ನೆ ವ್ಯಾಪಕ ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪.೪೮ ಇಂಚು ಸರಾಸರಿ ಮಳೆಯಾಗಿದ್ದರೆ ವೀರಾಜಪೇಟೆ ತಾಲೂಕಿನಲ್ಲಿ ೨.೬೩ ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೧.೪೩ ಇಂಚು ಸರಾಸರಿ ಮಳೆಯಾಗಿದೆ. ಪ್ರಸ್ತುತ ಜೂನ್ ತಿಂಗಳ ಎರಡು ಹಾಗೂ ಮೂರನೇ ವಾರದಲ್ಲೇ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲದ ಮುಂದಿನ ಅವಧಿಯ ಬಗ್ಗೆ ಜನತೆ ಆತಂಕ ಪಡುವಂತಾಗಿದೆ.

ಹೋಬಳಿವಾರು ವಿವರ

ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ತಾಲೂಕಿನ ಮಡಿಕೇರಿ ಕ.ಸ.ಬಾದಲ್ಲಿ ೩.೭೩ ಇಂಚು, ನಾಪೋಕ್ಲು ೩.೦೪, ಸಂಪಾಜೆ ೩.೧೦, ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಕ.ಸ.ಬಾ ೩.೧೪, ಹುದಿಕೇರಿ ೩, ಶ್ರೀಮಂಗಲ ೩.೭೨, ಪೊನ್ನಂಪೇಟೆ ೪.೪೦, ಅಮ್ಮತ್ತಿ ೦.೬೪, ಬಾಳೆಲೆ ೧.೩೮ ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಕ.ಸ.ಬಾ ೧ ಇಂಚು, ಶನಿವಾರಸಂತೆ ೧.೩೬, ಶಾಂತಳ್ಳಿ ೨.೮೦, ಕೊಡ್ಲಿಪೇಟೆ ೧.೯೦, ಕುಶಾಲನಗರ ೦.೪೪, ಸುಂಟಿಕೊಪ್ಪ ಹೋಬಳಿಯಲ್ಲಿ ೧.೪೫ ಇಂಚು ಮಳೆಯಾಗಿದೆ.

ಆತಂಕ ಮುಂದುವರಿಕೆ

ಪ್ರಸ್ತುತದ ಸನ್ನಿವೇಶದಿಂದಾಗಿ ಬೆಟ್ಟ - ಗುಡ್ಡ ಪ್ರದೇಶಗಳಲ್ಲಿ ಹಾಗೂ ನದಿ ಪಾತ್ರಗಳಲ್ಲಿ ವಾಸಿಸುತ್ತಿರುವ ಜನರು ಆತಂಕದಿAದಲೇ ದಿನ ಸಾಗಿಸುವಂತಾಗಿದೆ. ಕೆಲವೆಡೆ ಈಗಾಗಲೇ ಹಾನಿಯಾಗಿರುವ ಕುರಿತು ವರದಿಯಾಗಿದೆ.

ಗೋಣಿಕೊಪ್ಪಲು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದ.ಕೊಡಗಿನ ಜನರು ಹೈರಾಣಾಗಿದ್ದಾರೆ. ಮಳೆಯೊಂದಿಗೆ ವಿಪರೀತ ಗಾಳಿ ಬೀಸುತ್ತಿರುವುದರಿಂದ ರಸ್ತೆಯ ಬದಿಯ ತೋಟಗಳಲ್ಲಿರುವ ಮರಗಳು ಧರೆಗುರುಳಿವೆ. ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್‌ಗಳು ಕೂಡ ರಸ್ತೆಗೆ ಮಗುಚಿಕೊಂಡಿವೆ.

ಇದರಿAದಾಗಿ ವಿದ್ಯುತ್ ಪೂರೈಕೆಯ ನಿಂತು ಹೋಗಿವೆ. ಆದರೂ ಲಭ್ಯವಿರುವ ಚೆಸ್ಕಾಂ ಸಿಬ್ಬಂದಿಗಳ ಸಹಾಯದಿಂದ ಮಳೆ,ಗಾಳಿಯ ನಡುವೆ ಕೆಲಸ ನಿರ್ವಹಿಸಿ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಗೋಣಿಕೊಪ್ಪ ಚೆಸ್ಕಾಂ ವ್ಯಾಪ್ತಿಗೆ ಒಳಪಡುವ ಹಾತೂರು, ಬೈಗೋಡು,ದೇವರಪುರ, ತಿತಿಮತಿ, ಮಾಯಮುಡಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ,ಗಾಳಿಗೆ ಸಿಲುಕಿ ೪೫ ಮರಗಳು,೭೦ ವಿದ್ಯುತ್ ಕಂಬಗಳು, ಎರಡು ಟ್ರಾನ್ಸ್ ಫಾರ್ಮರ್‌ಗಳು ಸದ್ಯದ ಪರಿಸ್ಥಿತಿಯಲ್ಲಿ ಹಾಳಾಗಿವೆ.

ಚೆಸ್ಕಾಂ ಸಿಬ್ಬಂದಿಗಳೇ ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರಗಳನ್ನು ಕಡಿದು ತೆರವುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ವಿದ್ಯುತ್ ಕಂಬಗಳನ್ನು ಸರಿ ಪಡಿಸಲು ಸಮಯ ಸಾಕಾಗುತ್ತಿಲ್ಲ.ಆದರೂ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡಲು ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.

ಕೊರೊನಾ ಅಡ್ಡಿ..!

ಚೆಸ್ಕಾಂನ ಕೆಲವು ಸಿಬ್ಬಂದಿ ಗಳಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಕಾಣಿಸಿ ಕೊಂಡಿರುವ ಕಾರಣ ಕೆಲಸಕ್ಕೆ ಹಾಜ ರಾಗಲು ಸಾಧ್ಯವಾಗುತ್ತಿಲ್ಲ. ಲಭ್ಯವಿರುವ ಸಿಬ್ಬಂದಿಗಳ ಸಹಕಾರ ಪಡೆದು ಕೆಲಸ ನಿರ್ವ ಹಿಸುತ್ತಿದ್ದೇವೆ. ವಿಪರೀತ ಗಾಳಿಯಿಂದಾಗಿ ಸಮಸ್ಯೆ ಎದುರಾಗಿದೆ. ಇಲಾಖೆಯ ವತಿ ಯಿಂದ ಮಳೆಯ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ವಿದ್ಯುತ್ ಸಾಮಗ್ರಿಗಳನ್ನು ದಾಸ್ತಾನು ಇಡಲಾಗಿದೆ. ಅಗತ್ಯ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಕೆಲಸ ಕೈಗೆತ್ತಿಕೊಂಡು ಬೇಗನೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಹಾಯಕ ಇಂಜಿನಿಯರ್ ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ.

*ಗೋಣಿಕೊಪ್ಪಲು : ದಕ್ಷಿಣ ಕೊಡಗಿನ ಬ್ರಹ್ಮಗಿರಿ ಪರ್ವತ ಶ್ರೇಣಿ ಸುತ್ತಮುತ್ತ ಒಂದು ವಾರದಿಂದ ಬೀಳುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಗಡಿಭಾಗವಾದ ಬಾಳೆಲೆ ನಿಟ್ಟೂರು ನಡುವಿನ ಗದ್ದೆ ಬಯಲು ಲಕ್ಷö್ಮಣತೀರ್ಥ ನದಿ ಪ್ರವಾಹದಲ್ಲಿ ಮುಳುಗಿವೆ.

ಒಂದು ವಾರದ ಹಿಂದೆ ಲಕ್ಷö್ಮಣತೀರ್ಥ ನದಿ ಸಣ್ಣ ತೊರೆಯಂತೆ ಹರಿಯುತ್ತಿತ್ತು. ನದಿ ಪಾತ್ರದ ಪ್ರದೇಶಗಳಾದ ಇರ್ಪು, ಶ್ರೀಮಂಗಲ, ನಾಲ್ಕೇರಿ, ಹುದಿಕೇರಿ, ಪೊನ್ನಂಪೇಟೆ, ಕಿರುಗೂರು, ನಲ್ಲೂರು ಭಾಗಗಳಿಗೆ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಉಕ್ಕಿ ನದಿ ಹರಿಯುತ್ತಿದೆ. ಹರಿಹರ, ಬಲ್ಯಮಂಡೂರು, ಕಾನೂರು,ಕೊಟ್ಟಗೇರಿ, ನಿಟ್ಟೂರು, ಬಾಳೆಲೆ, ಮಲ್ಲೂರು ಭಾಗದ ನದಿಬಯಲಿನ ಗದ್ದೆಗಳು ಜಲಾವೃತಗೊಂಡಿವೆ. ಕಾನೂರು, ನಿಟ್ಟೂರು, ಬಾಳೆಲೆ ನಡುವೆ ನೀರಿನ ಪ್ರವಾಹ ಸಾಗರದಂತೆ ಕಂಡು ಬರುತ್ತಿದೆ. ಬಾಳೆಲೆ, ನಿಟ್ಟೂರು ನಡುವಿನ ಹಳೆ ಸೇತುವೆ ನೀರಿನಲ್ಲಿ ಮುಳುಗಿದೆ.

ಗೋಣಿಕೊಪ್ಪಲು, ನಲ್ಲೂರು, ಬೆಸಗೂರು ಮಾರ್ಗದಲ್ಲಿ ಹರಿಯುವ ಕೀರೆ ಹೊಳೆ ಕೂಡ ಮೈ ದುಂಬಿ ಹರಿಯುತ್ತಿದೆ. ಬಾಳೆಲೆ, ದೇವನೂರು, ರಾಜಾಪುರ ನಡುವಿನ ಕೀರೆ ಹೊಳೆಯೂ ಕೂಡ ತುಂಬಿ ಹರಿಯುತ್ತಿದೆ. ಪೊನ್ನಂಪೇಟೆ, ಹುದಿಕೇರಿ ನಡುವಿನ ಹೆದ್ದಾರಿ ಬದಿಯ ಬೇಗೂರು ಕೊಲ್ಲಿ ಗದ್ದೆಬಯಲು ಜಲಾವೃತಗೊಂಡಿದೆ.

ಶುಕ್ರವಾರ ಬೆಳಿಗ್ಗೆ ೧೦ ಗಂಟೆ ವರೆಗೆ ಸಾಧಾರಣವಾಗಿದ್ದ ಮಳೆ ಮಧ್ಯಾಹ್ನ ೩ ಗಂಟೆ ಬಳಿಕ ಬಿರುಸುಗೊಂಡಿತು. ಗಾಳಿಯೂ ರಭಸವಾಗಿ ಬೀಸುತ್ತಿದ್ದು ಅಲ್ಲಲ್ಲೆ ಮರಗಳು ಮುರಿದು ಬಿದ್ದಿವೆ. ಗೋಣಿಕೊಪ್ಪಲು, ಅಮ್ಮತ್ತಿ, ಕಾರ್ಮಾಡು ನಡುವೆ ಕಾಫಿ ತೋಟದ ಬಹಳಷ್ಟು ಮರಗಳು ರಸ್ತೆಗುರುಳಿವೆ. ಕಿರುಗೂರು, ನಲ್ಲೂರು, ಮಾಯಮುಡಿ, ಕೋಣನಕಟ್ಟೆ, ಬಾಳೆಲೆ ಮಾರ್ಗದಲ್ಲಿಯೂ ಹಲವು ಮರಗಳು ಮುರಿದು ಬಿದ್ದಿವೆ. ಕೆಲವು ಕಡೆ ವಿದ್ಯುತ್ ಕಂಬದ ಮೇಲೆ ಬಿದ್ದ ಮರಗಳು ತಂತಿಸಮೇತ ಕಂಬಗಳನ್ನೂ ತುಂಡರಿಸಿವೆ. ಇದರಿಂದ ಬಹಳ ಕಡೆ ಎರಡು ದಿನಗಳಿಂದ ವಿದ್ಯುತ್ ವ್ಯತ್ಯಯವಾಗಿದೆ. ಗೋಣಿಕೊಪ್ಪಲು ಸೆಸ್ಕ್ ಇಂಜನಿಯರ್ ಹಾಗೂ ಸಿಬ್ಬಂದಿಗಳು ಕಡಿತಗೊಂಡ ಮಾರ್ಗ ಸರಿಪಡಿಸಿ ವಿದ್ಯುತ್ ಸಂಪರ್ಕ ಒದಗಿಸಲು ಶ್ರಮಿಸುತ್ತಿದ್ದಾರೆ.ಸುಂಟಿಕೊಪ್ಪ : ಕಳೆದ ೪ ದಿನಗಳಿಂದ ಸುರಿದ ಮಳೆಯು ಇಂದು ಸ್ವಲ್ಪ ಬಿಡುವು ನೀಡಿದ್ದರಿಂದ ಮಧ್ಯಾಹ್ನದವರೆಗೆ ಸ್ವಲ್ಪ ಮಟ್ಟಿಗೆ ಬಿಸಿಲಿನ ವಾತಾವರಣ ಕಂಡು ಬಂತು. ಸುಂಟಿಕೊಪ್ಪ ನಗರದ ರಾಜ್ಯ ಹೆದ್ದಾರಿ ಬದಿಯಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿದ್ದು, ಎರಡು ಬದಿಯಲ್ಲಿ ಮಣ್ಣು ಸುರಿದು ಸಮತಟ್ಟು ಮಾಡಿದ್ದು, ಕಳೆದ ೪ ದಿನಗಳಿಂದ ಸುರಿದ ಮಳೆಗೆ ಅಯ್ಯಪ್ಪ ದೇವಾಲಯದಿಂದ ಗದ್ದೆಹಳ್ಳದವರೆಗೆ ಕೆಸರುಮಯವಾಗಿದೆ.

ಇದರಿಂದ ರಸ್ತೆಯ ಬದಿ ಅಂಗಡಿಯವರು ಹಾಗೂ ವಾಸದ ಮನೆಗಳಿಗೆ ತೆರಳಲು ತೀವ್ರ ರೀತಿಯ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯ ಜಾಗದಲ್ಲೇ ಕೆಸರಾಗಿದ್ದು, ಸವಾರರಿಗೆ ತೊಂದರೆ ಉಂಟಾಗಿದೆ. ಅದೇ ರೀತಿ ಉಲುಗುಲಿ ರಸ್ತೆಯಲ್ಲಿ ಮಾರುಕಟ್ಟೆಯಿಂದ ಹಾಗೂ ಹಾತೂರು ಉಲುಗುಲಿ ಪಾರ್ವತಮ್ಮ ಬಡಾವಣೆಯಿಂದ ಕೆಸರು ನೀರು ರಸ್ತೆಯಲ್ಲಿ ಬಂದು ಸಾರ್ವಜನಿಕರಿಗೆ ತೀವ್ರ ರೀತಿಯ ತೊಂದರೆಯಾಗಿದೆ. ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂಜಾನೆಯಿAದ ಕೆಲ ಕ್ಷಣ ಬಿಸಿಲಾಗಿ ಮರುಕ್ಷಣ ಮಳೆ ಸುರಿದು, ಮಧ್ಯಾಹ್ನದ ನಂತರ ಆಗಾಗ್ಗೆ ತುಂತುರು ಮಳೆ ಸುರಿದು, ಅರ್ಧ ಇಂಚು ಮಳೆಯಾಗಿದೆ.

ಗುರುವಾರ ಹಗಲು ರಾತ್ರಿ ಸುರಿದ ಮಳೆಗೆ ಕೆಲವು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ಮರಗಳು ಧರೆಗುರುಳಿವೆ. ನಿಡ್ತ ವ್ಯವಸಾಯೋತ್ಪನ್ನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಂಬಳೂರು ಗ್ರಾಮದ ಬಿ.ಪಿ. ಚಿನ್ನಪ್ಪ ಅವರ ಮನೆಯ ಮೇಲೆ ಗಾಳಿ - ಮಳೆಗೆ ಮರವೊಂದು ಉರುಳಿದ್ದು, ಹಾನಿಯಾಗಿದೆ; ೨ ಇಂಚು ಮಳೆಯಾಗಿದೆ.

ಬಿ.ಪಿ. ಚಿಣ್ಣಪ್ಪ ಅವರ ಮನೆಯ ಸುತ್ತಮುತ್ತ ಹಲಸು ಮತ್ತಿತರ ಕೆಲವು ಮರಗಳು ಶಿಥಿಲಾವಸ್ಥೆಯಲ್ಲಿದ್ದು, ಗಾಳಿ - ಮಳೆಗೆ ನೆಲಕಚ್ಚುವ ಹಂತ ತಲುಪಿದೆ. ಗ್ರಾಮದ ಇತರೆಡೆಯೂ ಅಂತಹ ಮರಗಳಿದ್ದು, ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಶೀಘ್ರ ಗಮನ ಹರಿಸಿ ಮರಗಳನ್ನು ತೆರವುಗೊಳಿಸಿದರೆ ಹಾನಿ ತಪ್ಪಿಸಬಹುದು ಎಂದು ಬೆಂಬಳೂರು ಗ್ರಾಮದ ಬೆಳೆಗಾರ ಬಿ.ಕೆ. ಚಿಣ್ಣಪ್ಪ ಅಭಿಪ್ರಾಯಪಟ್ಟರು.

ವೀರಾಜಪೇಟೆ: ವೀರಾಜಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಇಂದೂ ಮುಂದುವರೆದಿದೆ. ನಿನ್ನೆ ದಿನ ರಾತ್ರಿಯಿಡಿ ಸುರಿದ ಬಿರುಸಿನ ಭಾರೀ ಮಳೆಯ ಪರಿಣಾಮವಾಗಿ ಇಂದು ನಿರ್ಬಂಧ ಸಡಿಲಿಕೆಯ ಅವಧಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಸ್ತುಗಳನ್ನು ಖರೀದಿಸಲು ಸಮಸ್ಯೆಯಾಗಿತ್ತು.

ಕದನೂರು, ಕೆದಮುಳ್ಳೂರು, ಕಾಕೋಟುಪರಂಬು, ಆರ್ಜಿ, ಮಾಕುಟ್ಟ, ಬೇಟೋಳಿ, ಹೆಗ್ಗಳ, ರಾಮನಗರ, ಅಮ್ಮತ್ತಿ, ಕಾವಾಡಿ, ಬಿಳುಗುಂದ, ಒಂಟಿಯAಗಡಿ, ಚೆಂಬೆಬೆಳ್ಳೂರು ಸೇರಿದಂತೆ ನೆರೆ ಗ್ರಾಮಗಳ ವ್ಯಾಪ್ತಿಯಲ್ಲೂ ಮಳೆ ಸುರಿಯುತ್ತಿದೆ.

ಭಾರೀ ಮಳೆಗೆ ಕನ್ನಲ್ಲಿಕಟ್ಟೆ - ಕುಂದಳ್ಳಿ ಜಿಲ್ಲಾ ಮುಖ್ಯ ರಸ್ತೆ ಕುಸಿದು ಹಾನಿ ಉಂಟಾಗಿದೆ.