ಕಣಿವೆ, ಜೂ. ೧೮: ಕಣ್ಣು ಹಾಯಿಸಿದಷ್ಟು ದೂರ ಹಸಿರು ತುಂಬಿ ನಳ ನಳಿಸುವ ಶ್ರೀಗಂಧದ ಗಿಡ - ಮರಗಳ ರಾಶಿಯಿದ್ದರೂ ಕೂಡ ಅದೇಕೋ ಏನೋ ಅರಣ್ಯ ಅಧಿಕಾರಿಗಳಿಗೆ ಈ ಅಮೂಲ್ಯ ಶ್ರೀಗಂಧದ ಗಿಡ ಮರಗಳನ್ನು ಸಂರಕ್ಷಿಸಬೇಕೆAಬ ಮಹತ್ವಾಕಾಂಕ್ಷೆಯೇ ಇಲ್ಲ ಎನಿಸುತ್ತಿದೆ. ಏಕೆಂದರೆ ಕುಶಾಲನಗರದಿಂದ ಶನಿವಾರಸಂತೆಗೆ ತೆರಳುವ ಹೆದ್ದಾರಿಯ ಹೆಬ್ಬಾಲೆಯಿಂದ ಭೈರಪ್ಪನಗುಡಿ ಮಾರ್ಗದಲ್ಲಿ ಒಮ್ಮೆ ಸಂಚರಿಸಿದರೆ ತಿಳಿಯುತ್ತದೆ ಶ್ರೀಗಂಧದ ಗಿಡಗಳ ರಕ್ಷಣೆ ಇಲಾಖೆಯವರಿಂದ ಹೇಗಿದೆ ಎಂದು...?

ಕಳೆದ ಎರಡೂವರೆ ದಶಕಗಳಿಂದಲೂ ತಮ್ಮಷ್ಟಕ್ಕೆ ತಾವೇ ಸ್ವಾಭಾವಿಕವಾದ ಹುಟ್ಟು ಪಡೆದು (ಪಕ್ಷಿಗಳ ಮಲ ಮೂತ್ರದ ಮೂಲಕ ಬೀಜ ಪ್ರಸರಣೆಯಾಗಿ) ಎತ್ತರದಿಂದ ಎತ್ತರಕ್ಕೆ ಪ್ರತೀ ವರ್ಷವೂ ಬೆಳೆದು ನಿಲ್ಲುತ್ತಲೇ ಇರುವ ಈ ಅಮೂಲ್ಯವಾದ ಅರಣ್ಯ ಸಂಪತ್ತನ್ನು ರಕ್ಷಿಸುವ ಕೆಲಸ ಕಳೆದ ೨೫ ವರ್ಷಗಳಿಂದಲೂ ಇಲಾಖೆಯಿಂದ ಜರುಗಲೇ ಇಲ್ಲ.

ಏಕೆಂದರೆ ನಮ್ಮ ರಾಜ್ಯದ ಹೆಸರಿನ ವರ್ಣನೆಯಲ್ಲಿ ಇರುವಂತೆ ಚಂದನದ ನಾಡು, ಶ್ರೀಗಂಧದ ಬೀಡು ಕನ್ನಡ ನಾಡಿನಲ್ಲಿ ಈ ಶ್ರೀಗಂಧದ ಸಸ್ಯಗಳನ್ನು ಇಲಾಖಾ ನರ್ಸರಿಯಲ್ಲಿ ನಾಟಿ ಮಾಡಿ ಬೆಳೆಸಿ ಅವುಗಳನ್ನು ನರ್ಸರಿಯಿಂದ ಅರಣ್ಯ ಪ್ರದೇಶ ಅಥವಾ ಖಾಸಗಿ ಭೂಮಿಯಲ್ಲಿ ನೆಟ್ಟು ಬೆಳೆಸಲು ಸಾವಿರ ರೂ ಅಲ್ಲ, ಲಕ್ಷ ಲಕ್ಷ ರೂಗಳನ್ನು ಇಲಾಖೆ ವ್ಯಯಮಾಡುತ್ತದೆ. ಆದರೆ ಇಲಾಖೆಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆಯೇ ನೈಸರ್ಗಿಕವಾಗಿ ಬೆಳೆದು ನಿಂತ ಈ ಶ್ರೀಗಂಧದ ಗಿಡಗಳನ್ನು ಕೊನೆ ಪಕ್ಷ ಉಳಿಸಿ ಸಂರಕ್ಷಿಸುವ ಕೆಲಸ ಕೂಡ ಇಲಾಖೆಯಿಂದ ಏಕೆ ಆಗುತ್ತಿಲ್ಲ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಕೋಟ್ಯಾಂತರ ರೂ. ಲಾಭ ಕೊಡುವ ಸಂಜೀವಿನಿ

ಹೆಬ್ಬಾಲೆ ಗ್ರಾಮದ ಭೈರಪ್ಪನಗುಡಿ ರಸ್ತೆಯ ಮಾರ್ಗದ ಎಡ ಪ್ರದೇಶದಲ್ಲಿನ ಸಣ್ಣ ಸಣ್ಣ ಪರ್ವತ ಶ್ರೇಣಿಗಳ ಮಾದರಿಯ ಗುಡ್ಡಗಳ ಉದ್ದಕ್ಕೂ ಸುಮಾರು ಐದಾರು ಕಿಮೀ ಆಸುಪಾಸಿನ ಅರಣ್ಯದಂಚಿನಲ್ಲಿ ಬೆಳೆದು ನಿಂತಿರುವ ಈ ಸಸ್ಯಗಳ ಸುತ್ತ ಉದ್ದಕ್ಕೂ ಗಟ್ಟಿ ಮುಟ್ಟಾದ ತಂತಿ ಬೇಲಿಯನ್ನು ಎತ್ತರಕ್ಕೆ ನಿರ್ಮಿಸಿ, ಅದರ ಒಳಗೆ ಜನ ಹಾಗೂ ಜಾನುವಾರುಗಳು ನುಸುಳದಂತೆ ಇಲಾಖೆ ಅಧಿಕಾರಿಗಳು ಎಚ್ಚರಿಕೆಯ ಫಲಕಗಳನ್ನು ಅಳವಡಿಸಿ ಸಿಬ್ಬಂದಿಗಳ ಕಣ್ಗಾವಲಿಟ್ಟರೆ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಈ ಸಸ್ಯ ಸಂಪತ್ತು ಇಲಾಖೆಗೆ ಹತ್ತಾರು ಕೋಟಿ ರೂಗಳ ಲಾಭವನ್ನು ಕೊಡುವ ಸಂಜೀವಿನಿಯಾಗುವಲ್ಲಿ ಎರಡು ಮಾತಿಲ್ಲ.

ಕಟುಕರಿಂದ ರಕ್ಷಿಸಲು ಸಸ್ಯಗಳ ನಿವೇದನೆ

ಈ ಪ್ರದೇಶದಲ್ಲಿ ಕಳೆದ ತಿಂಗಳು ಒಂದಷ್ಟು ಮಳೆಗಳು ಉತ್ತಮವಾಗಿ ಸುರಿದಿದ್ದರಿಂದ ಇಲ್ಲಿನ ಶ್ರೀಗಂಧದ ಸಸ್ಯಗಳು ಹಸಿರು ತುಂಬಿ ನವಿರಾಗಿ ಬೆಳೆಯುತ್ತಿರುವ ಚಿತ್ರಣ ಈ ಹೆದ್ದಾರಿಯಲ್ಲಿ ಸಾಗುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿವೆ. ಅಷ್ಟೇ ಅಲ್ಲ ಎಲ್ಲೋ ಒಂದು ಕಡೆ ತಮ್ಮಲ್ಲಿ ಒಂದು ರೀತಿಯ ಅವ್ಯಕ್ತ ಭಯವನ್ನು ಇಟ್ಟುಕೊಂಡು ಬನ್ನಿ ದಾರಿ ಹೋಕರೇ, ಬನ್ನಿ ಪರಿಸರ ಪ್ರಿಯರೇ ನಮ್ಮನ್ನು ಕಟುಕರಿಂದ ರಕ್ಷಿಸ ಬನ್ನಿ. ಮುಂದಿನ ಹತ್ತಾರು ವರ್ಷಗಳ ಕಾಲ ಟಿಸಿಲೊಡೆದು ಮರಗಳಾಗಿ ಎತ್ತರಕ್ಕೆ ಬೆಳೆದು ಮನುಕುಲಕ್ಕೆ ನನ್ನ ಸುಗಂಧ ಪರಿಮಳ ಬೀರಲು ಕಾರಣರಾಗ ಬನ್ನಿ ಎಂದು ಶ್ರೀಗಂಧದ ತರು ಲತೆಗಳು ನಿವೇದಿಸುವಂತಿದೆ.

ಕೊಡಗಿನ ಶ್ರೀಗಂಧದ ಉದ್ಯಾನ

ಇಲಾಖೆಯ ಹಿರಿಯ ಅಧಿಕಾರಿಗಳು ಇನ್ನಾದರೂ ಸ್ವಾಭಾವಿಕವಾಗಿ ಬೆಳೆದು ನಿಂತಿರುವ ಈ ಶ್ರೀಗಂಧದ ಪ್ರದೇಶವನ್ನು ವಿಶೇಷವಾದ ಸೂಕ್ಷ್ಮ ಪ್ರದೇಶವಾಗಿ ಪರಿಗಣಿಸಬೇಕು. ವಿಶೇಷವಾದ ಅನುದಾನಗಳನ್ನು ತಂದು ಈ ಪ್ರದೇಶದಲ್ಲಿ ಸೂಕ್ತ ರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ "ಕೊಡಗಿನ ಶ್ರೀಗಂಧದ ಉದ್ಯಾನ"ವಾಗಿ ರೂಪುಗೊಳಿಸಬೇಕಿದೆ ಎಂಬುದು ಸಾರ್ವಜನಿಕರ ಹಾಗೂ ಪರಿಸರ ಪ್ರಿಯರ ಆಗ್ರಹವಾಗಿದೆ.

ಮರಗಳ ಬುಡಕ್ಕೆ ಗರಗಸ

ಬಹಳ ಸುಲಭವಾಗಿ ಹಣ ಮಾಡಬೇಕೆಂಬ ದಂಧೆಯಲ್ಲಿರುವ ಕೆಲವು ದುಷ್ಕರ್ಮಿಗಳು ಇಲ್ಲಿ ಬೆಳೆದಿರುವ ಶ್ರೀಗಂಧದ ಗಿಡಗಳ ಬುಡಕ್ಕೆ ಗರಗಸ ಇಟ್ಟು ಅದರ ಒಳ ಕಾಂಡ ಬಲಿತಿದೆಯೋ ಇಲ್ಲವೋ ಎಂಬುದನ್ನು ತಿಳಿಯುವ ಹುನ್ನಾರ ನಿರಂತರವಾಗಿ ಹಗಲು ರಾತ್ರಿ ಎನ್ನದೇ ನಡೆಯುತ್ತಲೇ ಇದೆ.

ಹಾಗಾಗಿ ಇದುವರೆಗೂ ಇಲ್ಲಿನ ಈ ಅಮೂಲ್ಯ ಸಂಪತ್ತಿನ ಬುಡಕ್ಕೆ ಕೊಡಲಿ ಇಟ್ಟಂತಹ, ಗರಗಸದಲ್ಲಿ ಹಾನಿ ಮಾಡಿದಂತಹ ಚೋರರನ್ನು ಗಮನಿಸಿ ಹಿಡಿದು ಬಂಧಿಸಿ ಶಿಕ್ಷೆ ಕೊಟ್ಟಿರುವ ಪ್ರಕರಣಗಳು ಇಲಾಖೆಯಿಂದ ನಡೆದಿಲ್ಲ. ಎಳೆಯ ಹಸುಳೆಯಂತಿರುವ ಈ ಎಳೆಯ ಗಿಡಗಳಿಗೆ ಮುಂದಿನ ದಿನಗಳಲ್ಲಿ ಏನಾದರೂ ಹಾನಿ ಪಡಿಸಿದರೆ ಇಲಾಖೆ ಅಂತಹ ಖದೀಮರಿಗೆ ನೀಡುವಂತಹ ಶಿಕ್ಷೆಗಳ ಬಗ್ಗೆ ಸ್ಪಷ್ಟವಾಗಿ ಎಚ್ಚರಿಕೆಯ ಫಲಕಗಳನ್ನು ಈ ಮಾರ್ಗದ ಉದ್ದಕ್ಕೂ ಅಳವಡಿಸುವ ಕೆಲಸ ಅತೀ ತುರ್ತು ಅಗತ್ಯವಾಗಬೇಕಿದೆ.

ಉರುವಲಿಗೂ ಕಡಿತ

ಸಮೀಪದ ಜನವಸತಿ ಪ್ರದೇಶಗಳ ನಿವಾಸಿಗಳು ತಮ್ಮ ಮನೆಗಳಲ್ಲಿ ಉರುವಲಾಗಿ ಬಳಕೆ ಮಾಡಲು ಈ ಗುಡ್ಡಕ್ಕೆ ಬಂದು ಸೌದೆ ಸರಂಜಾಮುಗಳನ್ನು ಸಂಗ್ರಹಿಸುವಾಗ ಈ ಶ್ರೀಗಂಧದ ಗಿಡಗಳ ರೆಂಬೆ ಕೊಂಬೆಗಳಿಗೆ ಕೊಡಲಿ ಪೆಟ್ಟು ಹಾಕಿ ಬಂದು ಮುಂದಿನ ಕೆಲ ದಿನಗಳಲ್ಲಿ ಅದು ಒಣಗಿದ ನಂತರ ಕಟ್ಟಿಗೆಯಾಗಿ ಕಟ್ಟಿ ತರುವಂತಹ ಪ್ರಸಂಗಗಳನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ.

ಖಾಸಗಿಯವರು ಮುಂದಾಗಬೇಕು

ಈ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಖಾಸಗಿ ಭೂಮಿಯಲ್ಲಿಯೂ ಈ ಶ್ರೀಗಂಧದ ಗಿಡಗಳು ಯಥೇಚ್ಛವಾಗಿ ಬೆಳೆದು ನಿಂತಿರುವುದರಿAದ ಅವುಗಳ ರಕ್ಷಣೆ, ಲಾಲನೆ ಹಾಗೂ ಪಾಲನೆಗೆ ಖಾಸಗಿ ವ್ಯಕ್ತಿಗಳು ಮುಂದಾಗಬೇಕಿದೆ. ಹೆಚ್ಚು ಬೆಲೆ ಬಾಳುವ ಗಿಡ. ಹಾಗೆಯೇ ಜಾಸ್ತಿ ತಲೆ ನೋವಿನ ಗಿಡವೆಂಬ ನಿರ್ಲಕ್ಷ್ಯ ಮಾಡದೇ ಅರಣ್ಯ ಇಲಾಖೆಯ ಜೊತೆ ಜಂಟಿಯಾಗಿ ಅವುಗಳ ರಕ್ಷಣೆಗೆ ಮುಂದಾಗಬೇಕಿದೆ.

ಅರಣ್ಯದAಚಿನ ಖಾಸಗಿ ಜಾಗದಲ್ಲಿ ಶ್ರೀಗಂಧದ ಗಿಡಗಳನ್ನು ಆರೈಕೆ ಮಾಡಿ ಮರಗಳಾಗಿ ಬೆಳೆಸಿದಲ್ಲಿ ಮುಂದಿನ ದಿನಗಳಲ್ಲಿ ಇಲಾಖೆಯೇ ಎಲ್ಲಿ ನಮ್ಮ ಭೂಮಿ ಹಾಗೂ ಅಲ್ಲಿ ಬೆಳೆದ ಅಮೂಲ್ಯ ಗಿಡ ಮರಗಳ ರಾಶಿಯನ್ನು ವಶಪಡಿಸಿಕೊಳ್ಳುತ್ತದೆ ಎಂಬ ಭಯ ಬೇಡ. ಏಕೆಂದರೆ ಇಲಾಖೆಯೇ ಖಾಸಗಿ ಜಾಗದಲ್ಲಿ ಗಿಡ ನೆಟ್ಟು ಅದರ ನಿರ್ವಹಣೆ ಹಾಗೂ ಮಾಲೀಕತ್ವವನ್ನು ರೈತರಿಗೆ ವಹಿಸುವ ಕಾನೂನಿನ ತಿದ್ದುಪಡಿಯಾಗಿರುವುದನ್ನು ಗಮನಿಸಬೇಕಿದೆ.

ಒಟ್ಟಾರೆ ಈ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತ ಶ್ರೀಗಂಧದ ಸಂಪತ್ತನ್ನು ಉಳಿಸಿ ಸಂರಕ್ಷಿಸಿದಲ್ಲಿ ಈ ಪ್ರದೇಶ ಜಿಲ್ಲೆಯಷ್ಟೇ ಅಲ್ಲ ರಾಜ್ಯದಲ್ಲಿಯೇ ವಿಶೇಷವಾಗಿ ಶ್ರೀಗಂಧದ ಆಲಯವಾಗಿ ರೂಪುಗೊಳ್ಳಲಿದೆ.

- ಕೆ.ಎಸ್. ಮೂರ್ತಿ ಕುಶಾಲನಗರ