ವೀರಾಜಪೇಟೆ, ಜೂ. ೧೮: ಕಳೆದ ೬ ದಿನಗಳಿಂದ ಕೊಡಗು ಕೇರಳ ಗಡಿ ಪ್ರದೇಶವಾದ ದಕ್ಷಿಣ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವೀರಾಜಪೇಟೆ ವಿಭಾಗದ ಐಮಂಗಲ, ಬಿಳುಗುಂದ, ಚೋಕಂಡಳ್ಳಿ ಕಾರ್ಮಾಡು ಸೇರಿದಂತೆ ವಿವಿಧೆಡೆಗಳಲ್ಲಿ ಕೃಷಿ ಚಟುವಟಿಕೆ ಆರಂಭಗೊAಡಿದೆ.

ವೀರಾಜಪೇಟೆ ವಿಭಾಗದಲ್ಲಿ ಟ್ರಾಕ್ಟರ್‌ನ ಉಳುಮೆಯೊಂದಿಗೆ ಬೀಜ ಬಿತ್ತನೆಗೂ ಕೆಲಸ ಆರಂಭವಾಗಿದೆ. ಆರ್ಜಿ, ಬೇಟೋಳಿ, ಕೆದಮುಳ್ಳೂರು, ಕದನೂರು ಭಾಗಗಳಲ್ಲಿಯೂ ಗದ್ದೆಗಳಲ್ಲಿ ಕೃಷಿ ಕಾರ್ಯ ಮುಂದುವರೆದಿದೆ. ಆರು ದಿನಗಳಿಂದ ಈ ವಿಭಾಗಕ್ಕೆ ಬೀಳುತ್ತಿರುವ ಮಳೆಯಿಂದ ಪಟ್ಟಣ ವ್ಯಾಪ್ತಿಯ ಹಳ್ಳಕೊಳ್ಳಗಳು ನೀರಿನಿಂದ ಭರ್ತಿಯಾಗುತ್ತಿವೆ. ಪಟ್ಟಣದಲ್ಲಿ ನೀರಿಲ್ಲದೆ ಬಣಗುಡುತ್ತಿದ್ದ ಕುಡಿಯುವ ನೀರಿನ ತೆರೆದ ಬಾವಿಗಳಲ್ಲಿ ನೀರು ಏರಿಕೆ ಕಂಡಿದೆ. ಬೇತ್ರಿ ಕಾವೇರಿ ಹೊಳೆಯ ಬದಿಯಲ್ಲಿ ಇಲಾಖೆಯಿಂದ ಕಾಂಕ್ರೀಟ್ ಕಲ್ವರ್ಟ್ ನಿರ್ಮಾಣದ ಸಂದರ್ಭದಲ್ಲಿ ನೀರು ಸರಬರಾಜಿನ ಪೈಪು ಜಖಂಗೊAಡಿದ್ದು ಇದನ್ನು ಸರಿಪಡಿಸಿ ಪಟ್ಟಣಕ್ಕೆ ನಲ್ಲಿ ನೀರಿನ ಸರಬರಾಜನ್ನು ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೀರಾಜಪೇಟೆ ಪಟ್ಟಣ ವ್ಯಾಪ್ತಿಯ ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪ ಬೆಟ್ಟ, ನೆಹರೂನಗರದ ಬೆಟ್ಟ ಪ್ರದೇಶಗಳಲ್ಲಿ ಈಗಿನ ಭಾರೀ ಮಳೆ ಮುಂದುವರಿದರೆ ಆತಂಕದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ. ಬೆಟ್ಟದ ಸೂಕ್ಷö್ಮ ಪ್ರದೇಶಗಳಲ್ಲಿರುವ ಕುಟುಂಬಗಳು ಭಾರೀ ಮಳೆಯಿಂದ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದರೆ ಪಟ್ಟಣ ಪಂಚಾಯಿತಿಯನ್ನು ಸಂಪರ್ಕಿಸುವAತೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ಗಡಿಭಾಗದಲ್ಲಿಯೂ ಭಾರೀ ಮಳೆ

ಕೊಡಗು ಕೇರಳ ಗಡಿಭಾಗವಾದ ಮಾಕುಟ್ಟ, ನೀರುಕೊಲ್ಲಿ, ಹನುಮಾನ್‌ಪಾಲ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಭಾಗದಲ್ಲಿ ಭಾರಿ ಮಳೆಯಿಂದ ಬೆಟ್ಟದಲ್ಲಿರುವ ಮರಗಳ ಕೊಂಬೆಗಳು ರಸ್ತೆಗೆ ಬೀಳುತ್ತಿವೆಯಾದರೂ ಈ ತನಕ ಅಂತರರಾಜ್ಯ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ. ಈ ರಸ್ತೆಯಲ್ಲಿ ಕಾರು ಹಾಗೂ ಗೂಡ್ಸ್ ವಾಹನಗಳು ನಿರಾತಂಕವಾಗಿ ಸಂಚರಿಸುತ್ತಿವೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.