ಮಡಿಕೇರಿ, ಜೂ. ೧೮ : ಕವಿ ಸಿದ್ದಲಿಂಗಯ್ಯ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಬದಲಾವಣೆಯನ್ನು ತಂದವರು, ಬಂಡಾಯ ಸಾಹಿತಿಗಳಾಗಿದ್ದ ಇವರು ಶೋಷಿತರ ಧ್ವನಿಯಾಗಿದ್ದರು. ಅವರು ‘‘ಕರ್ನಾಟಕದ ಅಂಬೇಡ್ಕರ್’’ ಎಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ್ದ ಸಾಹಿತಿ ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸಿದ್ದಲಿಂಗಯ್ಯ ಅವರನ್ನು ದಲಿತ ಕವಿ ಎಂದು ಸಂಭೋದಿಸುತ್ತಾರೆ ಆದರೆ ಅವರು ಬಂಡಾಯ ಸಾಹಿತಿ ಎಂದರು.

ಹಿರಿಯ ಸಾಹಿತಿ ಬಾಲಸುಬ್ರಮಣ್ಯ ಕಂಜರ್ಪಣೆಯವರು ಮಾತನಾಡುತ್ತಾ ಓರ್ವ ಶೋಷಿತ ವರ್ಗದ ದನಿಯಾಗಿ ಹಲವಾರು ಕವನ, ಲೇಖನ, ಪುಸ್ತಕ ಗಳನ್ನು ಬರೆದು ಅವರು ಪ್ರಕಟಿಸಿದ್ದಾರೆ. ಅವರ ಹೊಲೆ ಮಾದಿಗರ ಹಾಡು ಆ ಕಾಲದಲ್ಲಿ ಒಂದು ಕ್ರಾಂತಿಯನ್ನೇ ಮಾಡಿತ್ತು. ಆದರೆ ಅವರು ರಾಜಕೀಯ ರಂಗ ಪ್ರವೇಶಿಸಿದ ನಂತರ ಅವರ ಕವನಗಳಲ್ಲಿ ಕಂಡು ಬರುತಿದ್ದ, ಆಕ್ರೋಶದ ದನಿ ಕಡಿಮೆಯಾಗಿತ್ತು ಎಂದು ಅಭಿಪ್ರಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಕಾರ್ಯಕ್ರಮಗಳಿಗೆ ಸಿದ್ದಲಿಂಗಯ್ಯರವರು ಕೊಡಗಿಗೆ ಬಂದಿದ್ದಾರೆ. ಬಂಡಾಯ ಸಾಹಿತ್ಯ ಸಮ್ಮೇಳನವನ್ನು ಮಡಿಕೇರಿಯಲ್ಲಿ ನಡೆಸಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆದ ೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೆರವಣಿಗೆಯ ಸಂದರ್ಭ ರಥದಲ್ಲಿ ಬರಲು ಒಪ್ಪದೆ ಎತ್ತಿನ ಗಾಡಿಯಲ್ಲಿ ಬಂದರು ಎಂದು ನೆನಪಿಸಿಕೊಂಡರು.

ಅಧ್ಯಾಪಕ ಮ.ನ. ವೆಂಕಟನಾಯಕ್, ಸಾಹಿತಿ ಬಿ.ಎ. ಷÀಂಶುದೀನ್, ಮೈಸೂರಿನ ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ, ಸಾಹಿತಿ ಡಾ. ಜೆ ಸೋಮಣ್ಣ, ಸಾಹಿತಿ ಬಿ.ಆರ್. ಜೋಯಪ್ಪ ಸಿದ್ದಲಿಂಗಯ್ಯ ಅವರನ್ನು ನೆನಪಿಸಿಕೊಂಡರು.

ಬಳಗದ ಅಧ್ಯಕ್ಷ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಿದ್ದಲಿಂಗಯ್ಯ ಅವರ ಬರಹಗಳು ನಿರಂತರವಾಗಿ ನಮ್ಮೊಂದಿಗೆ ನಿಲ್ಲುತ್ತವೆ. ಅವರ ಚಿಂತನೆ ಮತ್ತು ಆದರ್ಶಗಳು ನಮಗೆ ದಾರಿದೀಪವಾಗಬೇಕು ಎಂದರು.

ಟಿ. ಜಿ. ಪ್ರೇಮ್ ಕುಮಾರ್, ಲೋಕನಾಥ್ ಅಮೆಚುರ್ ಮಾತನಾಡಿದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್‌ಫ್ರೆಡ್ ಕ್ರಾಸ್ತಾ ಸ್ವಾಗತಿಸಿ, ನಿರೂಪಿಸಿದರು.