ಸಿದ್ದಾಪುರ, ಜೂ. ೧೮: ಸಿದ್ದಾಪುರದ ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ಇದೀಗ ಈ ಗುಂಪುಗಾರಿಕೆಯು ಪಂಚಾಯಿತಿಯ ಆಡಳಿತದವರೆಗೂ ತಲುಪಿದ್ದು, ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿದ್ದಾಪುರದ ಗ್ರಾಮ ಪಂಚಾಯಿತಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ೨೫ ಸ್ಥಾನಗಳ ಪೈಕಿ ೧೫ ಸ್ಥಾನಗಳನ್ನು ಬಿಜೆಪಿ ಬೆಂಬಲಿಗರು ಪಡೆಯುವ ಮೂಲಕ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಆದರೆ ೧೫ ಸ್ಥಾನಗಳನ್ನು ಪಡೆದು ಬೀಗುತ್ತಿದ್ದ ಬಿಜೆಪಿ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂದರ್ಭದಿAದಲೇ ಭಿನ್ನಾಭಿಪ್ರಾಯ ಪ್ರಾರಂಭವಾಗಿದೆ. ಪಕ್ಷದಲ್ಲಿ ಎರಡು ಗುಂಪು ಆಗಿದೆ ಎಂಬ ಅಭಿಪ್ರಾಯವನ್ನು ಕಾರ್ಯಕರ್ತರು ಚರ್ಚಿಸುತ್ತಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಅಧ್ಯಕ್ಷರ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯಿತು. ನಂತರ ಮುಖಂಡರು ಸೇರಿ ಒಮ್ಮತದಿಂದ ಗುಹ್ಯ ಗ್ರಾಮದಿಂದ ಆಯ್ಕೆಯಾದ ರೀನಾ ತುಳಸಿ ಅವರನ್ನು ಆಯ್ಕೆ ಮಾಡಿದ್ದರು.

ಆದರೆ ಅಧ್ಯಕ್ಷೆಯಾಗಿ ಆಯ್ಕೆಯಾದ ರೀನಾ ತುಳಸಿ ಇದೀಗ ಪಕ್ಷದ ಕಾರ್ಯಕರ್ತರನ್ನು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳನ್ನು ಕಡೆಗಣಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದೆ.

ಈತನ್ಮಧ್ಯೆ ಇತ್ತೀಚೆಗೆ ಗುಹ್ಯ ಗ್ರಾಮದಿಂದ ಆಯ್ಕೆಯಾದ ಮಹಿಳಾ ಸದಸ್ಯೆಯೋರ್ವರನ್ನು ಬಿಜೆಪಿ ಪಕ್ಷದ ಕಾರ್ಯಕರ್ತ ಫೇಸ್‌ಬುಕ್ ವೊಂದರಲ್ಲಿ ನಿಂದಿಸಿರುವ ವಿಚಾರಕ್ಕೆ ಸಂಬAಧಿಸಿದAತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಈ ವಿಚಾರ ತಾರಕಕ್ಕೇರಿ ಸಿದ್ದಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ಸದಸ್ಯೆಯ ಪತಿಗೂ ಹಾಗೂ ಸಿದ್ದಾಪುರದ ಶಕ್ತಿ ಕೇಂದ್ರದ ಅಧ್ಯಕ್ಷರಿಗೂ ಮಾತಿನ ಚಕಮಕಿ ನಡೆದಿತ್ತು. ಈ ಬಗ್ಗೆ ಬಿಜೆಪಿ ಪಕ್ಷದ ಮುಖಂಡರಿಗೂ ಕಾರ್ಯಕರ್ತರು ದೂರು ನೀಡಿದ್ದಾರೆ. ಮುಸುಕಿನ ಗುದ್ದಾಟದಿಂದಾಗಿ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿದೆ.

ಪಂಚಾಯಿತಿಯ ಆಡಳಿತ ಮಂಡಳಿಯ ಭಿನ್ನಾಭಿಪ್ರಾಯ ಬಿಟ್ಟು ಜಿಲ್ಲೆಯಲ್ಲೇ ಅತಿ ದೊಡ್ಡ ಗ್ರಾ.ಪಂ. ಎಂದೇ ಖ್ಯಾತಿ ಪಡೆದಿರುವ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬೆಟ್ಟದಷ್ಟು ಸಮಸ್ಯೆಗಳಿದ್ದು, ಇದನ್ನು ರಾಜಕೀಯ ರಹಿತವಾಗಿ ಬಗೆಹರಿಸಲಿ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ವಾಸು