*ಗೋಣಿಕೊಪ್ಪ, ಜೂ. ೧೭: ಕೊರೊನಾ ಆತಂಕಕಾರಿ ದಿನಗಳಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕೊರೊನಾ ವಿರುದ್ಧ ಕಾರ್ಯಪ್ರವೃತ್ತರಾದ ಕಂದಾಯ ಇಲಾಖೆಯ ಸಿಬ್ಬಂದಿಗಳ ಸೇವೆ ಅತ್ಯಮೂಲ್ಯವಾಗಿದೆ.

ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ತಾ.ಪಂ., ಗ್ರಾ.ಪಂ. ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಗ್ರಾಮ ಟಾಸ್ಕ್ಫೋರ್ಸ್ಗಳ ಜತೆಗೆ ಕಂದಾಯ ಇಲಾಖೆಗಳ ಸಿಬ್ಬಂದಿಗಳ ಸೇವೆ ಜನವಲಯದ ಶ್ಲಾಘನೆಗೆ ಕಾರಣವಾಗಿದೆ.

ಕೊರೊನಾ ಬಾದಿತರ ಮತ್ತು ಸಂಕಷ್ಟದಲ್ಲಿರುವವರ ಸೇವೆಗಾಗಿ ಶ್ರಮಿಸುತ್ತಿರುವ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಪ್ರೋತ್ಸಾಹ ಮತ್ತು ಆತ್ಮಬಲವನ್ನು ತುಂಬುವ ಕಾರ್ಯದಿಂದ ಸೇವೆ ಸಲ್ಲಿಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ ವಿತರಿಸಿ ಶ್ಲಾಘಿಸಿದರು.

ಪೊನ್ನಂಪೇಟೆ ತಾಲೂಕಿನ ೪ ಹೋಬಳಿಗೆ ಒಳಪಡುವಂತೆ ೨೪ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ೬೫ ಗ್ರಾಮಗಳಲ್ಲಿ ಮೂರು ಉಪ ತಹಶೀಲ್ದಾರ್, ಓರ್ವ ಶಿರಸ್ತೇದಾರರು ಸೇರಿದಂತೆ ೧೩ ಗ್ರಾಮ ಲೆಕ್ಕಿಗರು, ೨೩ ಗ್ರಾಮ ಸಹಾಯಕರ ಸೇವೆಗಳು ಪರಿಗಣಿತವಾಗಿದೆ. ಕೊರೊನಾ ಕಾಲಘಟ್ಟದಲ್ಲಿ ಇವರ ಸೇವೆ ಅತ್ಯಮೂಲ್ಯವಾಗಿ ಜನಸಾಮಾನ್ಯರಿಗೆ ಸಹಕಾರವನ್ನು ಒದಗಿಸಿದೆ. ಸೋಂಕಿತರ ಚಿಕಿತ್ಸೆಗೆ ಬೇಕಾದ ಮೂಲ ಸೌಕರ್ಯ ಸೇರಿದಂತೆ ಇತರ ಸೇವೆಗಳು ಉತ್ತಮವಾಗಿ ನೀಡÀಲಾಗಿದೆ. ಇವರ ಈ ಸೇವೆಯನ್ನು ಪರಿಗಣಿಸಿ ಅಭಿನಂದನಾ ಪತ್ರವನ್ನು ತಹಶೀಲ್ದಾರ್ ಕಾವ್ಯರಾಣಿ ಪ್ರಥಮವಾಗಿ ಉಪ ತಹಶೀಲ್ದಾರ್ ಅಕ್ಕಮ್ಮ, ಶಿರಸ್ತೇದಾರ ರಾಧಕೃಷ್ಣ, ಕಂದಾಯ ಪರಿವೀಕ್ಷಕ ಮಂಜುನಾಥ್, ಸುದೀಂದ್ರ ಇವರುಗಳಿಗೆ ವಿತರಿಸಿದರು.