ಮಡಿಕೇರಿ, ಜೂ. ೧೮: ತಡೆಗೋಡೆಗಳನ್ನು ನಿರ್ಮಿಸುವದು ಭೂಕುಸಿತ, ರಸ್ತೆ ಬದಿ ಕುಸಿತ, ಇನ್ನಿತರ ಅನಾಹುತಗಳನ್ನು ತಡೆಗಟ್ಟಲು. ಅಂತೆಯೇ ಚರಂಡಿಗಳನ್ನು ನಿರ್ಮಾಣ ಮಾಡುವದು ಮಳೆ ನೀರು ಹಾಗೂ ಕೊಳಚೆ ನೀರು ರಸ್ತೆ ಮೇಲೆ ಹರಿಯದಂತೆ ಚರಂಡಿಯಲ್ಲಿ ಹರಿಯುವಂತೆ ಮಾಡುವ ಸಲುವಾಗಿ., ಆದರೆ., ಇಲ್ಲೊಂದು ಕಾಮಗಾರಿ ಹೇಗಿದೆಯೆಂದರೆ ರಸ್ತೆಗೆ ಮಣ್ಣು ಕುಸಿಯದಂತೆ ದೊಡ್ಡದಾದ ಕಾಂಕ್ರಿಟ್ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಅದರ ಕೆಳಗಡೆ ಕಾಂಕ್ರಿಟ್ ಚರಂಡಿ ನಿರ್ಮಿಸಿಲ್ಲ., ರಸ್ತೆಯಲ್ಲಿ ಹರಿಯುವ ನೀರು ಚರಂಡಿ ಸೇರಲು ಜಾಗವನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲ ಕವಲು ರಸ್ತೆಗೆ ಅಡ್ಡಲಾಗಿ ನೀರು ಹರಿಯಲು ಮೋರಿಯನ್ನು ಅಳವಡಿಸುವದರ ಬದಲಿಗೆ ರಸ್ತೆಗೆ ಸೇರಿಸಿ ಕಾಂಕ್ರಿಟ್ ಬೆಡ್ ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಮೇಲಿನಿಂದ ಬರುವ ನೀರೆಲ್ಲ ರಸ್ತೆ ಮೇಲೆಯೇ ಹರಿಯುವಂತಾಗಿದೆ..!

ಮಡಿಕೇರಿ ನಗರ ಸಭೆಯ ಈ ಹಿಂದಿನ ಆಡಳಿತ ಮಂಡಳಿ ಇದ್ದಾಗ ರಾಜಾಸೀಟು ಬಳಿಯಿಂದ ರೇಸ್‌ಕೋರ್ಸ್ ರಸ್ತೆಯ ವiಣ್ಣು ತೆಗೆದು ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ತಡೆಗೋಡೆಗೆ ಒತ್ತಿಕೊಂಡAತೆ ಕಾಂಕ್ರಿಟ್ ಚರಂಡಿಯನ್ನೂ ಮಾಡಲಾಗಿದೆ. ಆದರೆ ಇದೇ ಮುಖ್ಯ ರಸ್ತೆಯಿಂದ ಮೇಲ್ಭಾಗದ ಪೊಲೀಸ್ ವಸತಿ ಗೃಹದ ಕಡೆಗೆ ಹಾಗೂ ಮುಖ್ಯವಾಗಿ ಪೊಲೀಸ್ ವರಿಷ್ಠಾಧಿಕಾರಿಗಳ ವಸತಿ ಗೃಹಕ್ಕೆ ತೆರಳುವ ರಸ್ತೆಗಳಿಗೆ ಅಡ್ಡಲಾಗಿ ಮೋರಿ ಅಥವಾ ಚರಂಡಿಗೆ ಸ್ಲಾö್ಯಬ್ ಅಳವಡಿಸುವ ಬದಲಿಗೆ ರಸ್ತೆಯ ಬದಿಗೆ ಚರಂಡಿಯನ್ನು ಮುಗಿಸಿ ಕಾಂಕ್ರಿಟ್ ಬೆಡ್ ಹಾಕಲಾಗಿದೆ. ಅಲ್ಲದೆ, ರಸ್ತೆ ಮೇಲಿನ ನೀರು ಹರಿದು ಚರಂಡಿ ಸೇರಲು ಅಲ್ಲಲ್ಲಿ ಜಾಗ ಕೂಡ ಬಿಟ್ಟಿಲ್ಲ. ಇದರಿಂದಾಗಿ ಮೇಲೆ ರಾಜಾಸೀಟು ಬಳಿಯಿಂದಲೇ ಬರುವ ನೀರು ರಸ್ತೆಯ ಮೇಲೆಯೇ ಹರಿಯುವಂತಾಗಿದೆ.

ಇದೀಗ ಮಳೆಗಾಲ ಜೋರಾಗುತ್ತಿರುವಂತೆಯೇ ರಸ್ತೆ ಮೇಲೆ ನೀರು ಹರಿಯುತ್ತಿರುವದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ನಗರ ಸಭೆಯ ಗಮನಕ್ಕೆ ತಂದರಲ್ಲದೆ, ಅವೈಜ್ಞಾನಿಕ ಕಾಮಗಾರಿ ನಿರ್ವಹಿಸಿದ ಅಧಿಕಾರಿಗಳು ಹಾಗೂ ಅಭಿಯಂತರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ರಸ್ತೆಯಿಂದ ಚರಂಡಿಗೆ ನೀರು ಹರಿಯಲು ಕಾಂಕ್ರಿಟ್ ಚರಂಡಿಗಳ ಬದಿಯಲ್ಲಿ ತೂತು ಮಾಡಲಾಗಿದೆ. ಪೊಲೀಸ್ ವಸತಿ ಗೃಹದ ಕಡೆಗೆ ತೆರಳುವ ರಸ್ತೆಗೆ ಮೋರಿ ಅಳವಡಿಸಲಾಗಿದೆ. ಜೊತೆಗೆ ಎಸ್‌ಪಿ ಬಂಗಲೆಗೆ ತೆರಳುವ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಗಟ್ಟಿಯಾದ ಕಾಂಕ್ರಿಟ್ ಬೆಡ್ ಅನ್ನು ಇದೀಗ ಒಡೆದು ಹಾಕಲಾಗಿದೆ. ಆದರೆ, ರಸ್ತೆಗೆ ಮೋರಿ ಅಳವಡಿಸದ ಕಾರಣ ನೀರು ಮಾತ್ರ ರಸ್ತೆ ಮೇಲೆಯೇ ಹರಿಯುತ್ತಿದೆ.

ರಸ್ತೆ, ಚರಂಡಿ ನಿರ್ಮಾಣ ಮಾಡುವ ಸಂದರ್ಭ ಕಾಮಗಾರಿಯ ಉಸ್ತುವಾರಿ, ಗುಣಮಟ್ಟ ನೋಡಿಕೊಳ್ಳುತ್ತಿದ್ದ ಅಧಿಕಾರಿಗಳು ಹಾಗೂ ಅಭಿಯಂತರರು, ಮತ್ತು ಗುತ್ತಿಗೆದಾರರ ಕಾರ್ಯವೈಖರಿ, ಪರಿಜ್ಞಾನದ ಬಗ್ಗೆ ನಾಗರಿಕರು ಪ್ರಶ್ನಿಸುವಂತಾಗಿದೆ..! ? ಸಂತೋಷ್