ಮಡಿಕೇರಿ, ಜೂ. ೧೮: ಇಂದು ಬೆಳಿಗ್ಗೆ ಸುಮಾರು ೧೧:೧೫ ಕ್ಕೆ ಜಿಲ್ಲಾಡಳಿತ ಭವನದಲ್ಲಿ ನಿರಂತರ ಸೈರನ್ ಶಬ್ಧ ಕೇಳಲಾರಂಭಿಸಿದೊಡನೆ, ಭವನದೊಳಗಿದ್ದ ಸಿಬ್ಬಂದಿ, ಅಧಿಕಾರಿ ವರ್ಗದವರು ಶಿಸ್ತಿನಿಂದ ಹೊರಗೆ ಬಂದು ‘ಸೇಫ್ ಎಸಂಬ್ಲಿ ಪಾಯಿಂಟ್’ನಲ್ಲಿ ಸೇರಿಕೊಂಡರು. ಜಿಲ್ಲಾಡಳಿತ ಭವನಕ್ಕೆ ಪ್ರವೇಶ ಕಲ್ಪಿಸುವ ರಾಜಾಸೀಟು ರಸ್ತೆಯಲ್ಲಿ ಪೊಲೀಸ್ ಇಲಾಖೆಯಿಂದ ಸಂಚಾರಿ ವ್ಯವಸ್ಥೆಯನ್ನು ನಿಯಂತ್ರಣ ಮಾಡುವ ದೃಶ್ಯ ಕಂಡು ಬಂತು. ಇದೇ ರಸ್ತೆಯಿಂದ ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್, ಜಿಲ್ಲಾ ಅಗ್ನಿಶಾಮಕದಳದ ೨ ‘ಫೈರ್ ಇಂಜನಿನ್‌ಗಳು’ ಸೈರನ್ ಹಾಕಿಕೊಂಡು ಜಿಲ್ಲಾಡಳಿತ ಭವನಕ್ಕೆ ಆಗಮಿಸಿದವು.

ಅಗ್ನಿಶಾಮಕದಳದ ಒಂದು ವಾಹನದ ತಂಡ ಏಣಿ ಬಳಸಿ ಭವನದ ಹೊರಗಿನಿಂದ ೩ನೇ ಮಹಡಿಯ ಕಿಟಕಿಗೆ ಪ್ರವೇಶಿಸಲು ಪ್ರಯತ್ನಿಸಿತು. ಮತ್ತೊಂದು ತಂಡ ಭವನದ ಒಳಗೆ ಆಕ್ಸಿಜನ್ ಸಹಾಯದಿಂದ ಪ್ರವೇಶಿಸಿತು. ಕಟ್ಟಡದ ಒಳಗೆ ಮೂರ್ಛೆ ಬಿದ್ದಿದ್ದ ೪ ಮಂದಿಯನ್ನು ಹೆಗಲ ಮೇಲೆತ್ತಿಕೊಂಡ ಅಗ್ನಿಶಾಮಕದಳದ ಸಿಬ್ಬಂದಿ ಹೊರಗೆ ನಿಲ್ಲಿಸಿದ್ದ ಆ್ಯಂಬುಲೆನ್ಸ್ಗೆ ಸಾಗಿಸಿದರು. ಅಗ್ನಿಶಾಮಕದಳದ ಅಧಿಕಾರಿ ಚಂದನ್ ಅವರು ಜಿಲ್ಲಾಡಳಿತ ಭವನದ ಎಲ್ಲಾ ಇಲಾಖೆಯವರೊಂದಿಗಿದ್ದ ಹಾಜರಾತಿ ದಾಖಲು ಪುಸ್ತಕ ಪರಿಶೀಲಿಸಿ ೪ ಮಂದಿ ಹೊರತು ಪಡಿಸಿ ಇತರರೆಲ್ಲರೂ ‘ಸೇಫ್ ಎಸಂಬ್ಲಿ ಪಾಯಿಂಟ್’ ನಲ್ಲಿರುವುದಾಗಿ ಖಚಿತ ಪಡಿಸಿಕೊಂಡರು. ಕೇವಲ ೨೦ ನಿಮಿಷಗಳಲ್ಲಿ ಇಷ್ಟೆಲ್ಲಾ ನಡೆದಿದ್ದು, ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸದಾ ಸಿದ್ದವಾಗಿರುತ್ತದೆ ಎಂದು ಅಣಕು ಪ್ರದರ್ಶನದ ಮೂಲಕ ಬಿಂಬಿಸ ಲಾಯಿತು. ಅಣಕು ಪ್ರದರ್ಶನ ಸಂದರ್ಭ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ನಗರ ಠಾಣೆ ಠಾಣಾಧಿಕಾರಿ ಅಂತಿಮ, ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯ ವಾಸುದೇವ್ ಹಾಗೂ ಇತರರು ಹಾಜರಿದ್ದರು.