ವರದಿ : ಚನ್ನನಾಯಕ

ಪೊನ್ನಂಪೇಟೆ, ಜೂ. ೧೮: ಕಳೆದ ೮ ದಿನಗಳಿಂದ ಸುರಿಯುತ್ತಿರುವ ಮಳೆಯನ್ನು ತಡೆದುಕೊಳ್ಳುವ ಶಕ್ತಿ ಇಲ್ಲದೆ ಸೋರುತ್ತಿರುವ ಮನೆಯ ಮಾಳಿಗೆ ಒಂದು ಕಡೆ. ಮನೆಯ ಹೊರಗೆ ನಿಂತಿರುವ ನೀರು ಜಲದ ರೂಪದಲ್ಲಿ ಭೂಮಿಯೊಳಗಿಂದ ಮನೆಯೊಳಗೆ ನುಗ್ಗಿ ಮನೆಯ ನೆಲವನ್ನೆಲ್ಲ ಒದ್ದೆ ಮಾಡುತ್ತಿರುವುದು ಮತ್ತೊಂದು ಕಡೆ. ಇವೆರಡರ ಮಧ್ಯೆ ನಿದ್ದೆ ಇಲ್ಲದೆ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ

(ಮೊದಲ ಪುಟದಿಂದ) ಗ್ರಾಮದ ಬಸವೇಶ್ವರ ಬಡಾವಣೆಯ ಗಿರಿಜನರ ಗೋಳು ಮಾತ್ರ ಅತ್ಯಂತ ಶೋಚನೀಯವಾಗಿದೆ.

ಕಳೆದ ವರ್ಷ ಮನೆಯ ಮೇಲೆ ಹೊದಿಸಿರುವ ಟಾರ್ಪಲ್ ಗಳು ಹರಿದುಹೋಗಿದ್ದು, ಒಂದು ಸಣ್ಣ ಮಳೆ ಬಂದರೂ ಮನೆ ಸೋರಲು ಪ್ರಾರಂಭಿಸುತ್ತದೆ. ಬಸವೇಶ್ವರ ಬಡಾವಣೆಯಲ್ಲಿ ಸುಮಾರು ೬೦ ಕ್ಕಿಂತಲೂ ಹೆಚ್ಚು ಮನೆಗಳಿದ್ದು, ಮನೆಯಲ್ಲಿ ಸಣ್ಣ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ವಯಸ್ಕರು ಇದ್ದಾರೆ. ಮಳೆ ಹಾಗೂ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹರ ಸಾಹಸ ಪಡುವ ಪರಿಸ್ಥಿತಿ ಇವರದ್ದಾಗಿದೆ.

ತಿಂಗಳು ಕಳೆದರೂ ಟಾರ್ಪಲ್ ಬಂದಿಲ್ಲ : ಕೆಲವು ಮನೆಗಳು ಪೂರ್ಣವಾಗಿ ಹಾಳಾಗಿ ಹೋಗಿದ್ದು, ಮಳೆಯಿಂದ ಮನೆಯನ್ನು ರಕ್ಷಿಸಿಕೊಳ್ಳಲು ಮನೆಯ ಮೇಲೆ ಟಾರ್ಪಲ್‌ಗಳನ್ನು ಹೊದಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ೨೬ ರಂದು ಪೊನ್ನಂಪೇಟೆಯಲ್ಲಿರುವ ವೀರಾಜಪೇಟೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಿಂದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಕಚೇರಿಗೆ ಇಂಡೆAಟ್ ಸಮೇತ ಕೋರಿಕೆ ಪತ್ರವನ್ನು ಕಳುಹಿಸಲಾಗಿದೆ. ಅದೇ ರೀತಿ ವೀರಾಜಪೇಟೆ ತಾಲೂಕು ತಹಶೀಲ್ದಾರರ ಕಚೇರಿಯಿಂದ ಮೇ ೪ ರಂದು ಜಿಲ್ಲಾಧಿಕಾರಿಗಳ ಅವಗಾಹನೆಗೆ ಈ ಬಗ್ಗೆ ಪತ್ರವನ್ನು ಕಳುಹಿಸಲಾಗಿದೆ. ಕೋರಿಕೆ ಪತ್ರ ಕಳಿಸಿ ಒಂದೂವರೆ ತಿಂಗಳು ಕಳೆದರೂ ಜಿಲ್ಲಾಡಳಿತದಿಂದ ಫಲಾನುಭವಿಗಳಿಗೆ ಇನ್ನೂ ಟಾರ್ಪಲ್ ಗಳನ್ನು ವಿತರಣೆ ಮಾಡಲು ಸಾಧ್ಯವಾಗದೇ ಇರುವುದು ದುರಂತವೇ ಸರಿ. ಮಳೆಗಾಲಕ್ಕೆ ಮುನ್ನಾ ಟಾರ್ಪಲ್ ವಿತರಣೆ ಮಾಡಿದ್ದರೆ ಬಸವೇಶ್ವರ ಬಡಾವಣೆಯ ನಿವಾಸಿಗಳು ತಮ್ಮ ಮನೆಯನ್ನು ಮಳೆಯಿಂದ ಸ್ವಲ್ಪ ಮಟ್ಟಿಗಾದರೂ ರಕ್ಷಿಸಿಕೊಳ್ಳಲು ಸಾಧ್ಯವಿತ್ತು. ಈಗಾಗಲೇ ಬಹಳಷ್ಟು ತಡವಾಗಿದ್ದು ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಗಮನ ಹರಿಸಿ ಟಾರ್ಪಲ್ ವ್ಯವಸ್ಥೆ ಮಾಡಿದರೆ ಬಡ ಜೀವಗಳಿಗೆ ಸಹಾಯವಾಗುತ್ತದೆ.

ಸೇತುವೆ ಇದ್ದರೂ ಉಪಯೋಗ ಇಲ್ಲ...!

ಬಸವೇಶ್ವರ ಬಡಾವಣೆಗೆ ತೆರಳುವ ರಸ್ತೆಯು ಮಳೆಗಾಲದಲ್ಲಿ ನೀರಿನಿಂದ ತುಂಬಿ ಹರಿಯುತ್ತಿದ್ದರಿಂದ, ಗಿರಿಜನರ ಹೋರಾಟದ ಫಲವಾಗಿ ೨೦೧೮ ರಲ್ಲಿ ರಸ್ತೆಗೆ ಸೇತುವೆಯನ್ನು ಕಟ್ಟಲಾಗಿದೆ. ಆದರೆ ಸೇತುವೆಯನ್ನು ಯಾವುದೇ ವೈಜ್ಞಾನಿಕ ಕ್ರಮ ಅನುಸರಿಸದೆ, ಕಾಟಚಾರಕ್ಕೆ ನೆಲ ಮಟ್ಟದಲ್ಲೇ ಮುಳುಗು ಸೇತುವೆ ರೀತಿಯಲ್ಲಿ ಕಟ್ಟಿರುವುದರಿಂದಾಗಿ, ಒಂದೆರಡು ಜೋರು ಮಳೆ ಬಂದರೆ ಸಾಕು ಸೇತುವೆ ಮೇಲೆ ನೀರು ಹರಿಯುತ್ತದೆ. ಇನ್ನೂ ಮಳೆಗಾಲದಲ್ಲಿ ಸೇತುವೆ ಮೇಲೆ ೪ ಅಡಿಗಳಿಗಿಂತಲೂ ಹೆಚ್ಚು ನೀರು ಹರಿಯುವುದರಿಂದ ಮಳೆಗಾಲದ ಉಪಯೋಗಕ್ಕಾಗಿ ಕಟ್ಟಿರುವ ಸೇತುವೆಯಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು, ಸೇತುವೆ ಕಾಮಗಾರಿಗೆ ವೆಚ್ಚವಾಗಿರುವ ಲಕ್ಷಾಂತರ ರೂಪಾಯಿ ಹೊಳೆಯಲ್ಲಿ ಹುಣಸೆ ಹಣ್ಣು ಹಿಂಡಿದAತಾಗಿದೆ.

ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಹರಿಯುವುದರಿಂದ ಶಾಲಾ ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಯಾರಿಗಾದರೂ ಅನಾರೋಗ್ಯ ಉಂಟಾದರೆ ಮಳೆಗಾಲದಲ್ಲಿ ಆಸ್ಪತ್ರೆಗೆ ತೆರಳಲು ಸಹ ಕಷ್ಟವಾಗುತ್ತದೆ. ಅಗತ್ಯ ವಸ್ತು ಖರೀದಿಗೆ ಸಮೀಪದ ಅಂಗಡಿಗೆ ತೆರಳುವ ಬಡಾವಣೆಯ ನಿವಾಸಿಗಳು ಬೇರೆಯವರ ತೋಟದ ಮೂಲಕ ಕಾಲು ನಡಿಗೆಯಲ್ಲಿ ಕಿಲೋ ಮೀಟರ್‌ಗಳ ದೂರ ಸಾಗಬೇಕಾಗಿದೆ. ಆನೆ, ಹುಲಿಯ ಉಪಟಳ ಇರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡು ತೋಟದ ಒಳಗೆ ನಡೆಯುವ ಪರಿಸ್ಥಿತಿ ಇದೆ. ಸಂಬAಧಪಟ್ಟವರು ಸೇತುವೆಯನ್ನು ರಸ್ತೆ ಮಟ್ಟದಿಂದ ಎತ್ತರಕ್ಕೆ ಕಟ್ಟಿದರೆ ಮಳೆಗಾಲದಲ್ಲಿ ನೀರು ಸರಾಗವಾಗಿ ಸೇತುವೆಯ ಕೆಳಗೆ ಹರಿದು ಹೋಗಲು ಸಾಧ್ಯವಾಗುತ್ತದೆ. ಇದರಿಂದ ಜನರಿಗೆ ಉಪಯೋಗ ವಾಗಲಿದೆ. ಈ ನಿಟ್ಟಿನಲ್ಲಿ ಸಂಬAಧಪಟ್ಟ ಇಲಾಖೆಯವರು ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ.