ಮಡಿಕೇರಿ, ಜೂ. ೧೮ : ತೈಲೋತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶದ ಜನ ಬಿಜೆಪಿ ಆಡಳಿತವನ್ನು ಕೊನೆಗಾಣಿಸಲು ಎದುರು ನೋಡುತ್ತಿದ್ದಾರೆ. ಬಿಜೆಪಿ ವಾಷ್‌ಔಟ್ ಕಾಲ ಸನ್ನಿಹಿತವಾಗಿರುವುದರಿಂದ ಹತಾಶಗೊಂಡಿರುವ ಜಿಲ್ಲಾ ಬಿಜೆಪಿ ವಕ್ತಾರರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್.ಟಾಟು ಮೊಣ್ಣಪ್ಪ ತಿರುಗೇಟು ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು, ಜನಸಾಮಾನ್ಯರು ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಆದರೂ ಬಿಜೆಪಿ ಮಂದಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡೇ ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೈಲೋತ್ಪನ್ನಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಡುಗೆ ಅನಿಲದ ಬೆಲೆ ೪೦೦ರಿಂದ ೯೦೦ರ ಗಡಿ ದಾಟಿದರೆ, ಅಡುಗೆ ಎಣ್ಣೆ ರೂ.೯೫ ರಿಂದ ೧೮೫ಕ್ಕೆ ಏರಿಕೆಯಾಗಿದೆ. ರಸಗೊಬ್ಬರದ ಬೆಲೆಯು ದ್ವಿಗುಣವಾಗಿದೆ. ೨೦೧೩ರಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ೧೨೪ ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ ೬೨ ರೂ. ಇತ್ತು. ಇಂದು ಕಚ್ಚಾ ತೈಲದ ಬೆಲೆ ಡಾಲರ್‌ಗೆ ೬೫ ಡಾಲರ್ ಇದ್ದು, ಪೆಟ್ರೋಲ್ ಬೆಲೆ ೧೦೨ ರೂ. ಗೆ ತಲುಪಿದೆ. ಅರ್ಥಹೀನ ತೆರಿಗೆ ಹೊರೆಯಿಂದ ಸಣ್ಣ ಉದ್ಯಮಿಗಳು ಬೀದಿಪಾಲಾಗಿದ್ದಾರೆ. ಜವಾಬ್ದಾರಿ ಹೊರಬೇಕಾದ ಕೇಂದ್ರ ಸರ್ಕಾರ ಮೌನವಾಗಿದೆ ಎಂದು ಟೀಕಿಸಿದ್ದಾರೆ. ಇದೆಲ್ಲವನ್ನು ಅರಿತುಕೊಂಡಿರುವ ಕೊಡಗಿನ ಜನ ಬಿಜೆಪಿಯನ್ನು ವಾಷ್‌ಔಟ್ ಮಾಡಿ ಇವರನ್ನೆಲ್ಲ ಮನೆಗೆ ಕಳುಹಿಸುವ ಕಾಲ ದೂರವಿಲ್ಲ ಎಂದಿದ್ದಾರೆ.