ಈ ಜನರ ಶಾಂತಿ - ನೆಮ್ಮದಿ ಕದಡದೇ ಹರಿಯಲಿ...

ಕಣಿವೆ, ಜೂ. ೧೭: ಮಳೆಗಾಲ ಅಂತೂ ಇಂತೂ ಮತ್ತೊಮ್ಮೆ ಬಂದಿದೆ. ಪ್ರಕೃತಿ ಮಾತೆ ಆಯಾಯ ಕಾಲಮಾನದಲ್ಲಿ ಏನೇನು ಮಾಡಬೇಕೋ ಅದೆಲ್ಲವನು ತನ್ನಷ್ಟಕ್ಕೆ ತಾನು ಮಾಡುತ್ತಿರುತ್ತಾಳೆ. ಅಂತೆಯೇ ಬಿರು ಬೇಸಿಗೆಯ ದಿನಗಳು ಕಳೆದು ವಾಸ್ತವವಾಗಿ ಮಳೆ ಸುರಿಸುವ ಮಳೆಗಾಲ ಮತ್ತೊಮ್ಮೆ ಬಂದಿದೆ ಅಷ್ಟೆ.

ಮಳೆಗಾಲದಲ್ಲಿ ಜಿಲ್ಲೆಯ ಜೀವನದಿ ಕಾವೇರಿಯ ಮೂಲಸ್ಥಾನದಲ್ಲಿ ಹೆಚ್ಚು ಮಳೆ ಸುರಿದರೆ ಸಹಜವಾಗಿ ನದಿಯ ಉಗಮ ಸ್ಥಾನ ತಲಕಾವೇರಿಯ ಸನಿಹದ ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕೇರುತ್ತದೆ. ಹಾಗೆಯೇ ಮುಂದೆ ಸಾಗುತ್ತಾ ಸಾಗುತ್ತಾ ಹಳ್ಳಕೊಳ್ಳಗಳಲ್ಲಿ ಹರಿದು ಬರುವ ಮಳೆಯ ನೀರಿಗೆ ನದಿಯ ಒಡಲು ಹಿರಿದಾಗುತ್ತಾ ಸಾಗುತ್ತದೆ.

ಈ ಕ್ರಿಯೆ ಸ್ವಾಭಾವಿಕವಾಗಿ ನದಿ ಹುಟ್ಟಿದಂದಿನಿAದ ಇಂದಿನವರೆಗೂ ನಡೆದುಕೊಂಡೇ ಬರುತ್ತಿದೆ. ಆದರೆ ಬದಲಾದ ಆಧುನಿಕ ಕಾಲಘಟ್ಟದಲ್ಲಿ ಮಾನವ ತನ್ನಲ್ಲಿ ಇರುವುದು ಸಾಲದೆಂಬAತೆ ತಗ್ಗು ಪ್ರದೇಶದಲ್ಲಿ ಅವಳಷ್ಟಕ್ಕೆ ಅವಳಿರುವ ಹಾಗೂ ಅವಳು ಹರಿಯುವ ಸ್ಥಳವನ್ನೂ ಅತಿಕ್ರಮಿಸಿ ಅಥವಾ ಅತಿಕ್ರಮಿಸಿದವರಿಂದ ಖರೀದಿಸಿ ತನಗೆ ಬೇಕಾದ ರೀತಿಯಲ್ಲಿ ವೈಭೋಗದ ಮನೆಯನ್ನು ಕಟ್ಟಿ ವಾಸ ಮಾಡಲು ಶುರು ಮಾಡಿದ. ಅಷ್ಟೇ ಅಲ್ಲ. ತನ್ನ ಕಾಲ ಬುಡದಿ ಪ್ರಶಾಂತವಾಗಿ ಹರಿಯುತ್ತಿದ್ದ ಅವಳಲ್ಲಿಗೆ ತಾನು ಕಟ್ಟಿದ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವೆಲ್ಲಾ ಹರಿಸಿದ. ಸಾಲದೆಂಬAತೆ ಅವಳ ಗರ್ಭವನ್ನೂ ಹೊಕ್ಕಿ ಮರಳು ತೆಗೆದ.

ಶತ ಶತಮಾನಗಳಿಂದ ತಾನು ಜತನದಿಂದ ಜೋಪಾನವಾಗಿ ಸಂರಕ್ಷಿಸಿಕೊAಡು ಬಂದಿದ್ದ ನದಿಯೊಡಲಿನ ಅವಳ ಅವಲಂಬಿತ ಜೀವರಾಶಿಯನ್ನೆಲ್ಲಾ ನಾಶಪಡಿಸಿದ ಮಾನವನ ಮಿತಿ ಮೀರಿದ ದುಷ್ಕೃತ್ಯಗಳನ್ನು ಕಾವೇರಿ ಸಹಿಸದೇ ಮುನಿದು ನಿಂತಳು.

ಕಳೆದ ಮೂರು ವರ್ಷಗಳಿಂದ ಪ್ರತೀ ಮಳೆಗಾಲದಲ್ಲಿ ಕಾವೇರಿ ತನ್ನ ದಂಡೆಯ ತಗ್ಗು ಪ್ರದೇಶಗಳಲ್ಲಿ ಪ್ರವಹಿಸಿದಳು. ಕಳೆದ ಮೂರು ವರ್ಷಗಳ ಹಿಂದೆ ಅಂದರೆ ೨೦೧೮ ರ ಆಗಸ್ಟ್ ತಿಂಗಳ ೧೬ ರಿಂದ ೧೮ ರವರೆಗೂ ಮೂರು ದಿನಗಳು ನದಿಯ ತಗ್ಗು ಪ್ರದೇಶದಲ್ಲಿನ ಮಾದಾಪಟ್ಟಣ, ಬೈಚನಹಳ್ಳಿ, ಕುಶಾಲನಗರದ ಹಲವು ಬಡಾವಣೆಗಳು, ಕೊಪ್ಪ, ಆವರ್ತಿ, ಕೂಡಿಗೆ, ಕಣಿವೆ ಮುಂದುವರೆದು ರಾಮನಾಥಪುರ, ಕೇರಳಾಪುರ ಸೇರಿದಂತೆ ತಗ್ಗುಪ್ರದೇಶಗಳ ಹಲವೆಡೆ ಕಾವೇರಿ ತನ್ನ ಉಗ್ರ ಪ್ರತಾಪ ತೋರಿದ್ದಳು.

ಇದು ಸತತವಾಗಿ ಮುಂದಿನ ೨ ವರ್ಷಗಳು ಅಂದರೆ ೨೦೧೯ರ ಆಗಸ್ಟ್ ೫ ರಿಂದ ೭ ರವರೆಗೆ ಹಾಗೂ ೨೦೨೦ ರ ಆಗಸ್ಟ್ನಲ್ಲೂ ಯಥಾಸ್ಥಿತಿ ಮುಂದುವರೆದಿತ್ತು.

ಇದರಿಂದಾಗಿ ನದಿ ದಂಡೆಯ ತಗ್ಗು ಪ್ರದೇಶಗಳಲ್ಲಿ ವಾಸವಿದ್ದ ಮನೆಗಳ ಜನರು ಪ್ರವಾಹ ಬಂದಿಳಿದು ಹೋದ ನಂತರ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಆರ್ಥಿಕವಾಗಿ ಸಾಕಷ್ಟು ಜರ್ಜರಿತರಾಗಿದ್ದರು.

ಮನೆಗಳ ಮೇಲೆ ಹತ್ತಾರು ಅಡಿಗಳಷ್ಟು ಹರಿವ ನೀರು ತುಂಬಿದ ಪರಿಣಾಮ ಮಣ್ಣು, ಕಸ ಕಡ್ಡಿ, ಹಾವು ಚೇಳುಗಳಂತಹ ಜಲವಾಸಿಗಳು ಮನೆಯೊಳಗೆ ಸೇರಿಕೊಂಡಿದ್ದವು. ಅವುಗಳನ್ನು ತೆರವುಗೊಳಿಸಿ ಮನೆಗಳನ್ನು ಸ್ವಚ್ಛಗೊಳಿಸಿ ಮರಳಿ ಯಥಾಸ್ಥಿತಿಗೆ ತರುವಲ್ಲಿ ಮನೆ ಮಂದಿ ಸಾಕಾಗಿದ್ದರು. ನೀರು ತುಂಬಿದ್ದರಿAದ ಅದೆಷ್ಟೋ ಮನೆಗಳಲ್ಲಿದ್ದ ಅಮೂಲ್ಯವಾದ ಮರಗಳಿಂದ ಮಾಡಿಸಿದ್ದ ಮನೆಯ ಕಿಟಕಿ, ಬಾಗಿಲುಗಳು, ಪೀಠೋಪಕರಣಗಳು ಹಾನಿಯಾಗಿದ್ದವು.

ಶೌಚಾಲಯಗಳು ತುಂಬಿ ಹರಿದ ಪರಿಣಾಮ ಮನೆಗಳ ಗೋಡೆಗಳು ನೆಲವನ್ನೆಲ್ಲಾ ಉಜ್ಜಿ ತೊಳೆದು ಮತ್ತೆ ಹೊಸದಾಗಿ ಹಲವು ಮಂದಿ ಗೃಹಪ್ರವೇಶ ಮಾಡಿಕೊಂಡಿದ್ದರು.

ಈ ಪ್ರವಾಹ ಮತ್ತೆ ಎರಡು ಹಾಗೂ ಮೂರನೇ ವರ್ಷಗಳಲ್ಲಿ ಮರಳಿ ಬಂದು ಅದೇ ರೀತಿ ಹಾನಿ ಮಾಡಿದ್ದರಿಂದಾಗಿ ಈ ನದಿತಟದ ವಾಸಿಗಳಿಗೆ ಮಳೆಗಾಲ ಬಂತೆAದರೆ ಅದೇನೋ ಆತಂಕ, ಅವ್ಯಕ್ತ ಭಯ, ಮೈ ಮನವನ್ನು ಕದಡುವಂತಹ ಅಶಾಂತಿ ಆರಂಭವಾಗುತ್ತಿದೆ. ಮಳೆಯೂ ಬರಬೇಕು. ಅನ್ನದಾತನ ಬದುಕೂ ಹಸನಾಗಬೇಕು. ನದಿಯಲ್ಲಿ ನೀರು ಹರಿದು ಹೇಯ ಮನುಷ್ಯ ಮಾಡುವ ಮಲಿನವೂ ತೊಲಗಿ ಪ್ರತಿ ವರ್ಷ ನದಿ ಸ್ವಚ್ಛವೂ ಆಗಬೇಕು. ನಾಡಿನ ಅಣೆಕಟ್ಟುಗಳೂ ತುಂಬಬೇಕು.

ಆದರೆ, ನಮ್ಮ ಮನೆಯಂಗಳಕ್ಕೆ ಮಾತ್ರ ನದಿಯ ಪ್ರವಾಹದ ನೀರು ಹರಿದು ಬರದಂತೆ ಮಾಡೆಂದು ಅದೆಷ್ಟೋ ಮಂದಿ ತಾಯಿ ಕಾವೇರಿಯಲ್ಲಿ ಪ್ರಾರ್ಥಿಸಿದ್ದಾರೆ. ಇನ್ನು ನದಿ ದಂಡೆಯ ಕೆಲವು ನಿವಾಸಿಗಳು ಮಳೆಗಾಲಕ್ಕಂಜಿ ಸ್ವಂತದ ಹಾಗೂ ಬಾಡಿಗೆಗೆ ಪಡೆದಿದ್ದ ಮನೆಗಳನ್ನು ಖಾಲಿ ಮಾಡುವುದೂ ಉಂಟು.

ಅನಿರೀಕ್ಷಿತ ಪ್ರವಾಹದ ಮೊದಲ ಹಾಗೂ ಎರಡನೇ ವರ್ಷಗಳಲ್ಲಿ ಮನೆಗಳ ಒಳಗಿದ್ದ ಅಮೂಲ್ಯ ವಸ್ತುಗಳು ಹಾಗೂ ಪೀಠೋಪಕರಣಗಳು ಹಾನಿಯಾದ್ದರಿಂದ ಅವುಗಳ ಪೈಕಿ ಕೆಲವನ್ನು ಮತ್ತೆ ಸರಿಪಡಿಸಿ ಹೊಸದನ್ನು ಜೋಡಿಸಿದ್ದ ನದಿ ದಂಡೆಯ ನಿವಾಸಿ ಹವಾಲ್ದಾರ್ (ನಿವೃತ್ತ) ಜನಾರ್ಧನ್ ಎಂಬವರು ನದಿದಂಡೆಯ ಕುವೆಂಪು ಬಡಾವಣೆಯಲ್ಲಿ ಹಾಲೀ ವಾಸವಿದ್ದರೂ ಕೂಡ ಮಳೆಗಾಲಕ್ಕೆ ಅನುಕೂಲವಾಗಲು ಎತ್ತರದ ಪ್ರದೇಶದ ಬಸವೇಶ್ವರ ಬಡಾವಣೆಯಲ್ಲೊಂದು ಪರ್ಯಾಯ ಮನೆಯನ್ನು ಕಟ್ಟಿದ್ದು ಇದೀಗ ಮಳೆಗಾಲ ಕಳೆಯುವವರೆಗೂ ಸಾಮಾನು ಸರಂಜಾಮುಗಳೊAದಿಗೆ ಅಲ್ಲಿ ವಾಸವಿರುವುದಾಗಿ ಹೇಳುತ್ತಾರೆ. ಹೀಗೆಯೇ ತೋಟಗಳ ಮನೆಗಳಲ್ಲಿನ ಮತ್ತೊಂದಿಷ್ಟು ಮಂದಿ ಕುಶಾಲನಗರದಲ್ಲೂ ಒಂದು ಮನೆ ಇರಲಿ ಅಂತಾ ಕಾವೇರಿ ತೀರದಲ್ಲಿ ವಾಸವಿದ್ದವರು ಇದೀಗ ಮಳೆಗಾಲ ಆರಂಭವಾದೊಡೆ ಇಲ್ಲಿನ ಮನೆಗಳನ್ನು ಮಳೆಗಾಲ ಕಳೆಯುವವರೆಗೂ ಖಾಲಿ ಮಾಡುತ್ತಾರೆ. ಆದರೆ ಸಾಲ ಸೋಲ ಮಾಡಿಕೊಂಡು ನಿವೇಶನ ಖರೀದಿಸಿ ಕಷ್ಟಪಟ್ಟು ಮನೆ ಕಟ್ಟಿ ವಾಸವಿರುವ ಸಾಮಾನ್ಯ ಜನರು ಹಾಗೂ ಬಾಡಿಗೆ ಮನೆಗಳನ್ನು ಪಡೆದು ವಾಸವಿರುವ ಜನರಿಗಂತೂ ಈ ಮಳೆಗಾಲ ಎಂಬುದು ಆತಂಕ ಮೂಡಿಸುತ್ತದೆ.

ಅದೇನೇ ಇರಲಿ, ಈ ಬಾರಿ ಮಳೆಯ ಪ್ರಮಾಣ ಹಿಂದಿನ ವರ್ಷಗಳಷ್ಟು ಇರುವುದಿಲ್ಲ. ಹಿಂದಿನ ವರ್ಷಗಳಲ್ಲಿ ಮಳೆಯಿಂದಾದ ಹಾನಿಯ ಪ್ರಮಾಣಗಳು ಈ ಬಾರಿ ಘಟಿಸುವುದಿಲ್ಲ ಎಂದು ಖ್ಯಾತ ಭೂಗರ್ಭ ಶಾಸ್ತçಜ್ಞ ಹೆಚ್.ಎಸ್.ಎಂ. ಪ್ರಕಾಶ್ ತಮ್ಮ ಅಧ್ಯಯನದ ಭವಿಷ್ಯ ನುಡಿದಿದ್ದಾರೆ.

ಏನೇ ಇರಲಿ. ಈ ಬಾರಿಯ ಮಳೆಗಾಲದಲ್ಲಿ ಯಾವುದೇ ಆಪತ್ತು - ವಿಪತ್ತುಗಳಿಲ್ಲದೇ ಸಾಗಲೀ ಎಂದು ಎಲ್ಲರೂ ನಿವೇದಿಸೋಣವೇ...!

- ಕೆ.ಎಸ್. ಮೂರ್ತಿ