*ವೀರಾಜಪೇಟೆ, ಜೂ. ೧೭: ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿರುವ ರಾಯ್ ಡಿಸೋಜಾ ಅವರ ಚಿಕ್ಕಪೇಟೆಯಲ್ಲಿರುವ ಮನೆಗೆ ಜಮಾಅತ್ ಇಸ್ಲಾಮೀ ಹಿಂದ್ ಜಿಲ್ಲಾ ಸಮಿತಿಯ ತಂಡ ಭೇಟಿ ನೀಡಿ ಮೃತರ ತಾಯಿ ಮೆಟಿಲ್ಡಾ ಲೋಬೋ ಅವರಿಗೆ ಸಾಂತ್ವನ ಹೇಳಿದರು.

ಇಲಾಖೆಯು ೮ ಜನ ಪೊಲೀಸರನ್ನು ಅಮಾನತ್ತಿನಲ್ಲಿ ಇರಿಸಿ ಘಟನೆಯ ತನಿಖೆಯನ್ನು ಸಿ.ಐ.ಡಿ. ವಶಕ್ಕೆ ಒಪ್ಪಿಸಿರುವುದು ಸ್ವಾಗತಾರ್ಹ. ತನಿಖೆಯು ನಿಷ್ಪಕ್ಷಪಾತವಾಗಿರಬೇಕು. ತಪ್ಪಿತಸ್ಥರನ್ನು ಸೂಕ್ತ ಶಿಕ್ಷೆಗೆ ಒಳಪಡಿಸುವುದರ ಜೊತೆಯಲ್ಲಿಯೇ ಮೃತ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನೂ ಒದಗಿಸಬೇಕೆಂದು ಜಮಾಅತ್ ಸದಸ್ಯರು ಒತ್ತಾಯಿಸಿದ್ದಾರೆ.

ಮೃತರ ಮನೆಗೆ ಭೇಟಿ ನೀಡಿದ ತಂಡದಲ್ಲಿ ಜಮಾಅತ್ ಇಸ್ಲಾಮೀ ಹಿಂದ್ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್, ಸಮಿತಿ ಸದಸ್ಯ ಇ.ಎಂ. ಅಬ್ದುಲ್ ಖಾದರ್, ಮಹಿಳಾ ವಿಭಾಗ ವೀರಾಜಪೇಟೆ ಸ್ಥಾನೀಯ ಅಧ್ಯಕ್ಷೆ ಎಂ.ಟಿ.ಪಿ. ನಜ್ಮಾ, ಸದಸ್ಯೆ ಝೈನಬಾ ರೆಹೆಮಾನ್, ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಇ.ಎ. ತೌಫೀಖ್ ಹಾಜರಿದ್ದರು.