ಸಿದ್ದಾಪುರ, ಜೂ. ೧೭: ಇಲ್ಲಿನ ಮಾರುಕಟ್ಟೆಯೊಳಗೆ ಗ್ರಾಮ ಪಂಚಾಯಿತಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆ ಪಕ್ಕದಲ್ಲೇ ನೂರಾರು ಮನೆಗಳಿದ್ದರೂ ರಾಶಿ ಗಟ್ಟಲೆ ಕೊಳೆತ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ಸುರಿದಿರುವುದರಿಂದ ಕೊರೊನಾ ನಡುವೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಲಕ್ಷಗಟ್ಟಲೆ ಖರ್ಚು ಮಾಡಿ ಕೋಳಿ ಮತ್ತು ಕುರಿ ಮಾಂಸ ಮಾರಾಟಕ್ಕಾಗಿ ಗ್ರಾಮ ಪಂಚಾಯಿತಿ ಮಾರುಕಟ್ಟೆಯೊಳಗೆ ನಿರ್ಮಿಸಿರುವ ಮಳಿಗೆಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.

ಕೊಳೆತ ತ್ಯಾಜ್ಯಗಳನ್ನು ರಾಶಿ ಹಾಕಿರುವುದರಿಂದ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶ ದುರ್ವಾಸನೆ ಬೀರುತ್ತಿದ್ದು, ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಗ್ರಾಮ ಪಂಚಾಯಿತಿಯ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸ್ಥಳಕ್ಕೆ ಭೇಟಿ ನೀಡಿದ ವಾರ್ಡ್ ಸದಸ್ಯೆ ಪ್ರೇಮಾ ಅವರನ್ನು ತರಾಟೆಗೆ ತೆಗೆದುಕೊಂಡರು. ವಾರ್ಡ್ ಸದಸ್ಯೆಯಾಗಿ ತನ್ನ ಗಮನಕ್ಕೆ ತರದೆ ತ್ಯಾಜ್ಯ ಸುರಿದಿರುವುದಾಗಿ ತಿಳಿಸಿದ ಪ್ರೇಮಾ, ಕೂಡಲೇ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿ ಅಸಮಾಧಾನ ತೋಡಿಕೊಂಡರು.

ಗ್ರಾಮ ಹಾಗೂ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಸಾರ್ವಜನಿಕರಿಗೆ ಮನವಿ ಮಾಡುವ ಗ್ರಾಮ ಪಂಚಾಯಿತಿಯೇ ನೂರಾರು ಮನೆಗಳು ಇರುವ ಪ್ರದೇಶದಲ್ಲಿ ತ್ಯಾಜ್ಯವನ್ನು ತಂದು ಸುರಿದಿರುವುದಾಗಿ ಆರೋಪಿಸಿದ ಸ್ಥಳೀಯರು ಪಿಡಿಓ ಹಾಗೂ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಮಾರುಕಟ್ಟೆಯಿಂದ ತ್ಯಾಜ್ಯಗಳನ್ನು ತೆರವುಗೊಳಿಸದಿದ್ದರೆ ಗ್ರಾಮ ಪಂಚಾಯಿತಿ ಎದುರು ಸುರಿಯುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಸ್ಥಳೀಯರಾದ ಜಮೀಲ್, ನಾರಾಯಣ, ಪ್ರವೀಣ್, ಆಬಿದ್, ಸುರೇಶ್, ಪಾಪು, ಜೂನಿಸ್, ಸಾಜು, ಸನಾಫ್, ನವೀನ್, ನವೀದ್ ಮತ್ತಿತರರು ಇದ್ದರು.