ಪೊನ್ನಂಪೇಟೆ, ಜೂ.೧೯: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಮೀನು ವ್ಯಾಪಾರಿಗಳು ಅಧಿಕ ಬೆಲೆಗೆ ಮೀನು ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಆರೋಪ ಬಂದ ಹಿನ್ನೆಲೆಯಲ್ಲಿ, ಗ್ರಾ.ಪಂ. ವತಿಯಿಂದ ಮೀನು ವ್ಯಾಪಾರಿಗಳ ಸಭೆ ನಡೆಸಲಾಯಿತು. ಈ ಸಂಧರ್ಭ ಮಾತನಾಡಿದ ಪಿಡಿಓ ಪುಟ್ಟರಾಜು ಅಧಿಕ ಬೆಲೆಗೆ ಮೀನು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಪ್ರತಿ ದಿನ ಮೀನಿನ ಬೆಲೆಯನ್ನು ಅಂಗಡಿಯ ಮುಂದೆ ಬರೆದು ತೂಗುಹಾಕುವಂತೆ ತಿಳಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಕೊರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ವ್ಯಾಪಾರ ಮಳಿಗೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭ ಗ್ರಾ.ಪಂ.ಆಡಳಿತಾಧಿಕಾರಿ ಎಂ.ಕೆ. ದೀನಾ, ಗ್ರಾ.ಪಂ.ಸದಸ್ಯರಾದ ಮೂಕಳೇರ ಸುಮಿತ, ಅಣ್ಣೀರ ಹರೀಶ್, ಮೂಕಳೇರ ಮಧು, ಅಡ್ಡಂಡ ನಿಲನ್, ಬೊಟ್ಟಂಗಡ ದಶಮಿ, ಕರ್ತಮಾಡ ರಸಿಕ, ರಾಮಕೃಷ್ಣ, ವಿಜಯಕುಮಾರ್, ಅಮ್ಮತ್ತೀರ ಆರತಿ ಸುರೇಶ್, ಮೂಕಳೇರ ಭಾರತಿ, ಯಮುನಾ, ಮಾಜಿ ಗ್ರಾ.ಪಂ.ಸದಸ್ಯ ಅಮ್ಮತ್ತೀರ ಸುರೇಶ್ ಇನ್ನಿತರರು ಇದ್ದರು.