ವೀರಾಜಪೇಟೆ: ವೀರಾಜಪೇಟೆಯ ಡೊನೇಟರ್ಸ್ ಟ್ರಸ್ಟ್ ಹಾಗೂ ಬಿಸ್ಮಿಲ್ಲಾ ಶಾವಲಿ ಮಕಾನ್ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಖಬರಸ್ತಾನದಲ್ಲಿ ೧೦೧ ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಹೆಚ್. ಮತೀನ್ ಅವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಉತ್ತಮ ವಾತಾವರಣದಲ್ಲಿ ಪರಿಸರವನ್ನು ಉಳಿಸಿ ಕಾಪಾಡುವುದರಿಂದ ಆರೋಗ್ಯ ರಕ್ಷಣೆಯಾಗಲಿದೆ. ಅರಣ್ಯದಲ್ಲಿನ ಮರಗಳ ನಾಶದಿಂದ ಪರಿಸರಕ್ಕೂ ಹಾನಿಯಾಗಲಿದೆ. ಪ್ರತಿಯೊಬ್ಬರೂ ಪರಿಸರ ಕಾಪಾಡಲು ಪ್ರಯತ್ನಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ, ಟ್ರಸ್ಟ್ನ ಅಧ್ಯಕ್ಷ ಎನ್.ಕೆ. ಶಮೀರ್. ಮಕಾನ್ ಕಮಿಟಿಯ ಕಾರ್ಯದರ್ಶಿ ಫಾಹೀಮ್ ಹಾಗೂ ಪದಾಧಿಕಾರಿಗಳು, ಸಂಘಟನೆಗಳ ಕಾರ್ಯಕರ್ತರುಗಳು ಹಾಜರಿದ್ದರು.ನಾಪೋಕ್ಲು: ಗ್ರಾಮ ಪಂಚಾಯಿತಿಯ ವತಿಯಿಂದ ಹಳೆತಾಲೂಕಿನ ಶ್ರೀ ಭಗವತಿ ದೇವಾಲಯದ ಆವರಣದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರುಳೀಧರ್ ಕರುಂಬಮ್ಮಯ್ಯ ಅವರು ಹಣ್ಣಿನ ಗಿಡಗಳನ್ನು ನೆಟ್ಟು ಈ ವಿಭಾಗದ ಬೆಳೆಗಾರರಿಗೆ ಗಿಡಗಳನ್ನು ಗ್ರಾಮ ಪಂಚಾಯಿತಿಯಿAದ ಉಚಿತವಾಗಿ ನೀಡುವುದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾತಿಯಿಯ ಅಧ್ಯಕ್ಷೆ ಹೆಚ್.ಎಸ್. ಪಾರ್ವತಿ, ಈ ವಿಭಾಗದ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಬಿ.ಎಂ. ಪ್ರತೀಪ, ಬಾಳೆಯಡ ಪುಷ್ಪ, ಭಗವತಿ ದೇವಾಲಯದ ಗೌರವ ಕಾರ್ಯದರ್ಶಿ ಅರೆಯಡ ಸೋಮಪ್ಪ, ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಲ್ಲಂಡ ಚೊಂದಕ್ಕಿ ಮತ್ತು ದೇವಾಲಯದ ಅರ್ಚಕ ಹರೀಶ್ ಭಟ್ ಇದ್ದರು.

ಕನ್ನಡ ಸಾಹಿತ್ಯ ಭವನ

ಕೂಡಿಗೆ: ಕುಶಾಲನಗರ ಅರಣ್ಯ ಇಲಾಖೆ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗದೊಂದಿಗೆ ಕುಶಾಲನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅನೇಕ ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಅವರು ನೀಡಿದರು. ಈ ಸಂದರ್ಭ ಉಪ ವಲಯ ಅರಣ್ಯ ಅಧಿಕಾರಿ ಅಂತೋಣಿ ಡಿಸೋಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಮಣಜೂರು ಮಂಜುನಾಥ, ಅರಣ್ಯ ರಕ್ಷಕರಾದ ಟಿ.ಕೆ. ಸತೀಶ್, ವಿ.ಎಸ್. ಮಂಜೇಗೌಡ ಸೇರಿದಂತೆ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.