ಮಡಿಕೇರಿ, ಜೂ. ೧೯: : ತಾ.೨೧ ರಂದು ಜಿಲ್ಲೆಯಲ್ಲಿ ವ್ಯಾಕ್ಸಿನ್ ಮೇಳ ನಡೆಯಲಿದ್ದು, ಎಂದಿಗಿAತ ೩ ಪಟ್ಟು ಹೆಚ್ಚು ವ್ಯಾಕ್ಸಿನ್ ನೀಡುವ ಗುರಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಟ್ಟುಕೊಂಡಿದೆ. ತಾ,೨೧ ರಂದು ೧೮ ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರು, ಈಗಾಗಲೇ ರಾಜ್ಯ ಸರಕಾರ ಗುರುತಿಸಿರುವ ಆದ್ಯತಾ ವಲಯದ ಫಲಾನುಭವಿಗಳು ಹಾಗೂ ೪೫ ವರ್ಷ ಮೇಲ್ಪಟ್ಟವರಿಗೆ ಜಿಲ್ಲೆಯಾದ್ಯಂತ ನಿಗದಿತ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಪ್ರತಿದಿನ ಜಿಲ್ಲೆಯಲ್ಲಿ ಸರಾಸರಿ ೨,೫೦೦ ಮಂದಿಗೆ ಲಸಿಕೆ ನೀಡಲಾಗುತ್ತಿದೆ. ತಾ.೨೧ ರಂದು ಇದಕ್ಕಿಂತ ೩ ಪಟ್ಟು ಹೆಚ್ಚು ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಂಡಿರುವುದಾಗಿ ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗೋಪಿನಾಥ್ ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಕೇಂದ್ರಗಳು ತಾ.೨೧ ರಿಂದ ಚಾಲನೆ

ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಈ ಹಿಂದೆ ಲಸಿಕೆ ನೀಡಲಾಗುತ್ತಿತ್ತು. ಮಳೆ ಇರುವ ಕಾರಣ ಇಲ್ಲಿ ಲಸಿಕೆ ನೀಡಲು ಕಷ್ಟವಾಗುತ್ತದೆ. ಆದ್ದರಿಂದ ಕಾವೇರಿ ಕಲಾಕ್ಷೇತ್ರ ಹಾಗೂ ಓಂಕಾರ ಸದನದಲ್ಲಿ ಲಸಿಕೆ ನೀಡುವ ಕಾರ್ಯ ತಾ.೨೧ ರಿಂದ ಪ್ರಾರಂಭವಾಗುತ್ತದೆ. ಅಗತ್ಯವಿದ್ದಲ್ಲಿ ಎಫ್.ಎಮ್.ಸಿ ಕಾಲೇಜನ್ನು ಕೂಡ ಬಳಸಿಕೊಳ್ಳಲಾಗುವುದು ಎಂದು ಡಾ.ಗೋಪಿನಾಥ್ ತಿಳಿಸಿದ್ದಾರೆ.

ಕಾಳಜಿ ಕೇಂದ್ರಗಳಿಗೆ ತೆರಳುವವರಿಗೆ ಲಸಿಕೆ

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಬಹುದಾದ ಬಹಳಷ್ಟು ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳ ನಿವಾಸಿಗಳ ಸ್ಥಳಾಂತರಕ್ಕೆ ಕ್ರಮ ವಹಿಸಲಾಗಿದೆ. ಸ್ಥಳಾಂತರ ಗೊಳ್ಳುವ ನಿವಾಸಿಗಳಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗುತ್ತಿದೆ. ವೀರಾಜಪೇಟೆ ಯ ಕೆಲವು ಭಾಗಗಳು, ಬೇತ್ರಿಯ ಹಲವು ಸ್ಥಳಾಂತರಗೊಳ್ಳುವ ನಿವಾಸಿ ಗಳಿಗೆ ಲಸಿಕೆ ನೀಡಲಾಗುತ್ತಿದೆ. ತಾ.೨೧ ರಂದು ಮಡಿಕೇರಿಯ ಚಾಮುಂಡೇಶ್ವರಿ ನಗರದ ಸ್ಥಳಾಂತರಗೊಳ್ಳುವ ನಿವಾಸಿಗಳಿಗೂ ಲಸಿಕೆ ನೀಡಲಾಗುತ್ತದೆ ಎಂದು ಡಾ.ಗೋಪಿನಾಥ್ ಅವರು ತಿಳಿಸಿದ್ದಾರೆ.