ಗೋಣಿಕೊಪ್ಪಲು, ಜೂ. ೧೯: ಹುಲಿ ದಾಳಿಯಿಂದಾಗಿ ಹಸು ಹಾಗೂ ಕರುವನ್ನು ಕಳೆದುಕೊಂಡಿದ್ದ ರೈತ ಕುಟುಂಬಗಳಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ಕೊಡಿಸುವಲ್ಲಿ ರೈತ ಸಂಘದ ಮುಖಂಡರು ಯಶಸ್ವಿಯಾಗಿದ್ದಾರೆ.

ಪೊನ್ನಂಪೇಟೆ ಹೋಬಳಿಯ ಬೆಕ್ಕೆಸೊಡ್ಲೂರು ಗ್ರಾಮದ ಮಲ್ಲಮಡ ಉಷಾ ಎಂಬವರಿಗೆ ಸೇರಿದ ಗಬ್ಬದ ಹಸು ಹಾಗೂ ಅದೇ ಗ್ರಾಮದ ಬಾಚಮಡ ರಾಜಪ್ಪ ಅವರಿಗೆ ಸೇರಿದ್ದ ಕರುವನ್ನು ಇತ್ತೀಚೆಗೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು.

ಈ ವೇಳೆ ವಿಷಯ ತಿಳಿದ ರೈತ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಹಸು ಹಾಗೂ ಕರುವಿನ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯ ಇಲಾಖೆಯ ವೈದ್ಯರಿಂದ ನಡೆಸಿದ್ದರು.

ನಂತರ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಸಲ್ಲಬೇಕಾದ ಪರಿಹಾರ ಮೊತ್ತವನ್ನು ಗರಿಷ್ಠ ಪ್ರಮಾಣದಲ್ಲಿ ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲ ದಿನಗಳಲ್ಲಿ ಪರಿಹಾರ ಚೆಕ್ ವಿತರಿಸುವ ಭರವಸೆ ನೀಡಿದ್ದರು.

ರೈತ ಮುಖಂಡರಿಗೆ ನೀಡಿದ ಭರವಸೆಯಂತೆ ಇಲಾಖೆಯ ಅಧಿಕಾರಿಗಳು ಕರು ಕಳೆದುಕೊಂಡ ಬೆಸಗೂರು ಗ್ರಾಮದ ರಾಜಪ್ಪ ಅವರಿಗೆ ರೂ. ೨೫ ಸಾವಿರ ಹಾಗೂ ಹಸು ಕಳೆದುಕೊಂಡ ಬಾಚಮಾಡ ಉಷಾ ಅವರಿಗೆ ರೂ. ೩೫ ಸಾವಿರದ ಚೆಕ್‌ಗಳನ್ನು ರೈತ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ದಿವಾಕರ್ ನೀಡಿದರು.

ಈ ವೇಳೆ ರೈತ ಸಂಘದ ಜಿಲ್ಲಾ ಮುಖಂಡರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಚೆಟ್ರುಮಾಡ ಸುಜಯ್ ಬೋಪಯ್ಯ, ಆಲೆಮಾಡ ಮಂಜುನಾಥ್, ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಪುಚ್ಚಿಮಾಡ ಸಂತೋಷ್, ತೀತರಮಾಡ ರಾಜ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.