ಸುAಟಿಕೊಪ್ಪ, ಜೂ. ೧೯: ಮನಸು ಮಾಡಿದರೆ, ಪ್ರಯತ್ನ ಪಟ್ಟರೆ ಸಮಾಜಕ್ಕೆ ತನ್ನಿಂದಾಗುವ ಏನಾದರೂ ಕೊಡುಗೆ ನೀಡಬಹುದು ಎಂಬುದನ್ನು ೭ನೇ ಹೊಸಕೋಟೆಯ ಹಸಿವು ನೀಗಿಸುವ ತಂಡ ಸಾಬೀತುಪಡಿಸಿದೆ.

ಕೊರೊನಾ ಮಹಾಮಾರಿಯಿಂದ ಎಲ್ಲಾ ವರ್ಗದವರ ಬದುಕು ಅತಂತ್ರವಾಗಿದೆ. ಕೆಲಸವಿಲ್ಲದೆ ಮನೆಯಲ್ಲಿ ಕೂರುವ ಮಂದಿ ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ. ಈ ಪರಿಸ್ಥಿತಿಯನ್ನು ಮನಗಂಡ ೭ನೇ ಹೊಸಕೋಟೆಯ ೫ ಮಂದಿಯ ತಂಡ ಹಸಿವು ನೀಗಿಸುವ ಯೋಜನೆಗೆ ಕೈಹಾಕಿದ್ದು ದಾನಿಗಳಿಂದ, ತಮ್ಮ ಪರಿಚಯಸ್ಥರಿಂದ ಸಹಾಯಕ್ಕೆ ಕೈಚಾಚಿ ತಾವೇ ಅಡುಗೆ ತಯಾರಿಸಿ ಹಸಿದವರಿಗೆ ಗುಡ್ಡೆಹೊಸೂರುವಿನಿಂದ ಸುಂಟಿಕೊಪ್ಪದವರೆಗೆ ಏಪ್ರಿಲ್ ೨೮ ರಿಂದ ಪ್ರತಿದಿನ ಮಧ್ಯಾಹ್ನ ರಾಜ್ಯ ಹೆದ್ದಾರಿಯಲ್ಲಿ ಸಾಗುವ ಲಾರಿ, ಟಿಪ್ಪರ್, ವಿವಿಧ ಸಾಮಗ್ರಿ ಸಾಗಿಸುವ ಚಾಲಕರು, ಕಾರ್ಮಿಕರಿಗೆ, ರಸ್ತೆಬದಿ ಇರುವ ತಂಗುದಾಣದಲ್ಲಿ ಮಧ್ಯಾಹ್ನದ ಊಟವಿಲ್ಲದೆ ಕಂಗಾಲಾಗಿರುವ ಹಸಿದವರಿಗೆ ಈ ತಂಡ ಅನ್ನ ದಾಸೋಹ ನೀಡುತ್ತಾ ಬಂದಿದೆ.

ತಾ. ೨೮ ರಿಂದ ಸುಂಟಿಕೊಪ್ಪ ಮಾರುಕಟ್ಟೆಯಲ್ಲಿ ಹಸಿದಿರುವ ಕಾರ್ಮಿಕರಿಗೆ ದಿನನಿತ್ಯ ಇವರು ಆಹಾರವನ್ನು ಪೂರೈಸುತ್ತಿದ್ದು, ಈ ತಂಡ ದಾನಿಗಳಿಂದ ಸಹಾಯ ಸಿಗದಿದ್ದಾಗ ಸ್ವಂತ ಕೈಯಿಂದ ಹಣ ಹಾಕಿ ಆಹಾರ ತಯಾರಿಸಿ ಬಡಿಸಿದ್ದೂ ಇದೆ. ಅಲ್ಲದೆ ಇವರ ಸಮಾಜಸೇವೆ, ಅನ್ನದಾನ ಮಹತ್ವವನ್ನು ಅರಿಸಿಕೊಂಡ ದಾನಿಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದು ಅನ್ನದಾನಕ್ಕೆ ಧನ ಸಹಾಯ ನೀಡಿದ್ದಾರೆ. ಲಾಕ್‌ಡೌನ್‌ನಲ್ಲಿ ಹಸಿವಿನಿಂದ ಬಳಲಿದವರಿಗೆ ಅನ್ನ ನೀಡಿರುವುದು ತಮ್ಮ ತಂಡಕ್ಕೆ ಸಂತೃಪ್ತಿ ತಂದಿದೆ. ಲಾಕ್‌ಡೌನ್ ಕೊನೆಯ ದಿನ ತಾ. ೨೧ ರಂದು ದಿನಂಪ್ರತಿ ೧೦೦ ರಿಂದ ೧೫೦ ಮಂದಿಗೆ ನೀಡುವ ಅನ್ನದಾನ ಮಾಡುವ ಕಾರ್ಯ ಅಂತ್ಯ ಹಾಡಲಿದೆ ಎಂದು ೭ನೇ ಹೊಸಕೋಟೆಯ ಹಸಿವು ನೀಗಿಸುವ ತಂಡದ ಅಧ್ಯಕ್ಷ ಮುರುಗೇಶ್, ಕಾರ್ಯದರ್ಶಿ ಸುಗುಣ, ಸಹ ಕಾರ್ಯದರ್ಶಿ ಹಂಸ, ಉಪಾಧ್ಯಕ್ಷ ಹಂಸ, ಗೌರವ ಅಧ್ಯಕ್ಷ ರವಿಚಂದ್ರ ವಿವರಿಸಿದ್ದಾರೆ.

- ರಾಜು ರೈ.