ಭಾಗಮಂಡಲ, ಜೂ. ೧೯: ೨೦೧೯ರಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೀಡಾಗಿದ್ದ ತಡೆಗೋಡೆ ಕಾಮಗಾರಿ ಅಸಮರ್ಪಕ ವಾಗಿದ್ದು, ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸಲು ಸಾರ್ವಜನಿಕರು ಮುಂದಾಗಿದ್ದಾರೆ.

ಚೇರಂಬಾಣೆಯ ಕೊಳಗದಾಳು ಗ್ರಾಮದ ಸಿದ್ಧಾರೂಢ ಆಶ್ರಮದ ಬಳಿ ೨೦೧೯ನೇ ಇಸವಿಯಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಬರೆ ಕುಸಿತ ಉಂಟಾಗಿ ಆಶ್ರಮದ ಕಟ್ಟಡ ನೆಲಸಮವಾಗಿತ್ತು ಕೊಳಗದಾಳು, ಬೆಟ್ಟತ್ತೂರು, ಮದೆನಾಡು ರಸ್ತೆಯಲ್ಲಿ ಆಶ್ರಮದ ಬಳಿ ಬರೆ ಕುಸಿತ ಆದ ಕಾರಣ ರಸ್ತೆ ಅಪಾಯದ ಸ್ಥಿತಿಗೆ ತಲುಪಿತ್ತು. ಮಳೆ ಹಾನಿ ಕಾಮಗಾರಿಯಲ್ಲಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಲು ೨೫ ಲಕ್ಷ ಮಂಜೂರಾತಿ ಆಗಿ ಟೆಂಡರ್ ಪ್ರಕ್ರಿಯೆ ನಡೆದು ಗುತ್ತಿಗೆದಾರರಿಗೆ ಕೆಲಸ ವಹಿಸಿದ್ದರೂ, ಇದೀಗ ೨ ವರ್ಷ ಕಳೆದಿದೆ. ಕೆಲಸ ಮಾಡದೆ ಬರಿ ತಡೆಗೋಡೆ ನಿರ್ಮಾಣಕ್ಕೆ ೬೦ ಅಡಿ ಉದ್ದ ೩೦ ಅಡಿ ಎತ್ತರದಲ್ಲಿ ಅಡಿಪಾಯಕ್ಕೆ ಗುಂಡಿ ತೋಡಿದ್ದು, ಇದು ರಸ್ತೆಯಿಂದ ೨ ಅಡಿ ಅಂತರ ದಲ್ಲಿ ಇರುವುದರಿಂದ ಮಳೆಗಾಲದಲ್ಲಿ ರಸ್ತೆ ಕುಸಿತ ಆಗುವ ಸಂಭವವಿರುತ್ತದೆೆ ಮತ್ತು ಕೊಳಗದಾಳು ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತ ಆಗುವ ಅಪಾಯವಿದೆ.

ಸಂಬAಧಿಸಿದ ಇಲಾಖೆ ಇದಕ್ಕೆ ನೇರ ಹೊಣೆ ಆಗಿದ್ದು, ಇದೇ ರಸ್ತೆಯಲ್ಲಿ ಕೊಳಗದಾಳು, ಬೆಟ್ಟತ್ತೂರು ಗ್ರಾಮದ ಗಡಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಹಣ ಮಂಜೂರಾತಿ ಮಾಡಿ ಕೆಲಸ ಮಾಡದೇ ಬಿಲ್ ಮಾಡಿದ್ದೂ ಇದೆ, ರಸ್ತೆಯಲ್ಲಿ ಎರಡು ತಡೆಗೋಡೆ ಕೆಲಸದಲ್ಲಿ ಅಳತೆಗಿಂತ ಕಮ್ಮಿ ಕೆಲಸ ಮಾಡಿ ಬಿಲ್ ಆಗಿದ್ದು, ಹಣ ಲೂಟಿ ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ ಎಂದು ಆರೋಪಿಸಲಾಗಿದೆ. ಇಲಾಖೆಯಿಂದ ತಕ್ಷಣ ಕಾಮಗಾರಿ ನಡೆಸಿ ಕೊಡಬೇಕು, ಇಲ್ಲದಿದ್ದರೆ ಕೊಳಗದಾಳು ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಲು ತೀರ್ಮಾನಿಸಿರು ವುದಾಗಿ ಸ್ಥಳೀಯರು ತಿಳಿಸಿದ್ದಾರೆ.