*ಸಿದ್ದಾಪುರ, ಜೂ.೧೯ : ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ವಾಲ್ನೂರು ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಮಾಚಂಗಡ ಪ್ರಭು ಅವರಿಗೆ ಸೇರಿದ ಹಸು ಇದಾಗಿದ್ದು, ಆನೆ ದಂತದಿAದ ಘಾಸಿಗೊಳಿಸಿದ ಪರಿಣಾಮ ತೊಡೆ ಭಾಗದಲ್ಲಿ ಗಾಯವಾಗಿದೆ. ದಾಳಿ ಸಂದರ್ಭ ಇತರ ಹಸುಗಳು ಕಿರುಚಿಕೊಂಡಾಗ ಅಕ್ಕಪಕ್ಕದ ಜನರು ಓಡಿ ಬಂದಿದ್ದಾರೆ. ಇದನ್ನು ಗಮನಿಸಿದ ಕಾಡಾನೆ ಸ್ಥಳದಿಂದ ಕಾಲ್ಕಿತ್ತಿದೆ.

ಮೀನುಕೊಲ್ಲಿ ಅರಣ್ಯ ವಿಭಾಗದ ವನಪಾಲಕ ಕೂಡಕಂಡಿ ಸುಬ್ರಾಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ಗ್ರಾ.ಪಂ ಸದಸ್ಯ ಭುವನೇಂದ್ರ ಅವರು ಅರಣ್ಯ ಇಲಾಖೆಯ ನಿರ್ಲಕ್ಷö್ಯವೇ ನಿರಂತರ ಕಾಡಾನೆ ದಾಳಿಗೆ ಕಾರಣವೆಂದು ಆರೋಪಿಸಿದರು. ಸುಮಾರು ೯ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ರೈಲ್ವೆ ಕಂಬಿಗಳ ಮೂಲಕ ನಿರ್ಮಿಸುತ್ತಿರುವ ತಡೆಬೇಲಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇತ್ತೀಚೆಗಷ್ಟೇ ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದ ಪರಿಣಾಮ ಹೊಟ್ಟೆಗೆ ತೀವ್ರ ರೀತಿಯ ಗಾಯಗಳಾಗಿ ಹಸುವೊಂದು ಸಾವನ್ನಪ್ಪಿದೆ. ಇದೀಗ ಮತ್ತೆ ಹಸುವಿನ ಮೇಲೆ ದಾಳಿಯಾಗಿದೆ ಎಂದು ಭುವನೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. -ಅಂಚೆಮನೆ ಸುಧಿ