ಸೋಮವಾರಪೇಟೆ, ಆ. ೨೪: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿ ಮತ್ತು ಕೋವಿಡ್ ಕುರಿತು ಮಾಹಿತಿ ಅಭಿಯಾನದ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಶಾಂತಳ್ಳಿ ಹೋಬಳಿಯ ಕೃಷಿ ಅಧಿಕಾರಿ ಕೆ.ಎ. ಜಹಾನ್ ತಾಜ್ ಮಾತನಾಡಿ, ಕೃಷಿ ಕಾರ್ಯಗಳು ಸ್ಥಗಿತಗೊಂಡರೆ ಆಹಾರದ ಉತ್ಪಾದನೆ ಕುಂಠಿತ ಗೊಳ್ಳಲಿದೆ. ಈ ಹಿನ್ನೆಲೆ ಕೃಷಿ ಇಲಾಖೆಯ ಮೂಲಕ ಹಲವಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇವುಗಳ ಬಗ್ಗೆ ಮಾಹಿತಿ ಪಡೆದು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇಲಾಖೆಯ ಪ್ರಮುಖ ಯೋಜನೆ ಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಚಾರದ ವಾಹನದ ಮೂಲಕ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಇದೇ ಸಂದರ್ಭ ಚಾಲನೆ ನೀಡಲಾಯಿತು. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ೩ ಗ್ರಾಮ ಪಂಚಾಯಿತಿಗಳಲ್ಲಿ ಕೃಷಿ ಅಭಿಯಾನ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ರುದ್ರಪ್ಪ, ಉಪಾಧ್ಯಕ್ಷೆ ಭವಾನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ಪಂಚಾಯಿತಿ ಸದಸ್ಯರಾದ ನವೀನ್, ಮೋಹಿತ್, ಆರತಿ, ಉಷಾ ಸೇರಿದಂತೆ ಇತರರು ಇದ್ದರು.