ಮಡಿಕೇರಿ, ಆ. ೨೪: ಅವ್ವ ಪಾಜೆರ ಉಳಿಕೆ ಬೊಳ್ಚೆಕಾಯಿತ್ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ಎರಡು ವರ್ಷದ ಹಿಂದೆ ವಾಟ್ಸಾಪ್ ಗುಂಪಾಗಿ ಪ್ರಾರಂಭವಾದ ಕೊಡವಾಮೆರ ಕೊಂಡಾಟ, ನಂತರ ಒಂದು ಸಂಘಟನೆಯಾಗಿ ರೂಪುಗೊಂಡು ಹಲವು ಸಾಹಿತ್ಯ ಮತ್ತು ಜನಾಂಗೀಯ ಸೇವೆಯಲ್ಲಿ ತೊಡಗಿಕೊಂಡು, ಇದೀಗ ತನ್ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.

ಗೂಗಲ್ ಮೀಟ್ ವೆಬಿನಾರ್'ನಲ್ಲಿ ಸಂಘಟನೆಯ ಅಧ್ಯಕ್ಷ ಮತ್ತು ಸಂಸ್ಥಾಪಕ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಯೂಟ್ಯೂಬ್ ಚಾನೆಲನ್ನು ಅಸೀಮ ಪತ್ರಿಕೆಯ ಸಂಪಾದಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯರೂ ಆಗಿರುವ ಮಾಣಿಪಂಡ ಸಂತೋಷ್ ತಮ್ಮಯ್ಯ ಅವರು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು ಒಂದು ಜನಾಂಗ ಅದರ ಮೂಲ ಸಂಸ್ಕೃತಿ, ಕಟ್ಟುಪಾಡು ಆಚರಣೆಗಳನ್ನು ಯತಾವತ್ತಾಗಿ ಪಾಲಿಸುವಂತಾಗಬೇಕು. ಹಲವು ಕೊಡವ ಬುಡಕಟ್ಟು ಸಂಸ್ಕೃತಿಯನ್ನು ಮೇಲೆತ್ತುವ ಕಾರ್ಯ ವನ್ನು ಜನಾಂಗದ ಸಂಘಟನೆಗಳು ಮಾಡಬೇಕು. ಈ ನಿಟ್ಟಿನಲ್ಲಿ ಕಳೆದೆರಡು ವರ್ಷಗಳಿಂದ ಕಾರ್ಯತತ್ಪರ ವಾಗಿರುವ ಕೊಡವಾಮೆರ ಸಂಘಟನೆಯು ಇನ್ನಷ್ಟು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಡಿ ಇಡಬೇಕೆಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಜನಸೇವೆ ಅಥವಾ ಜನಾಂಗ ಸೇವೆ ಮಾಡುವವರಿಗೆ ಬದ್ಧತೆ ಇರಬೇಕು. ಸ್ಪಷ್ಟ ಗುರಿ ಹಾಗೂ ಉದ್ದೇಶ ಇಟ್ಟು ಹೋದರೆ ಮಾತ್ರ ಯಶಸ್ಸು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೂಕಳಮಾಡ ರಂಜು ನಾಣಯ್ಯ, ಮಾಳೇಟಿರ ಶ್ರೀನಿವಾಸ್, ಚೇಮಿರ ಪೊನ್ನಪ್ಪ, ಆಪಾಡಂಡ ಜಗಮೊಣ್ಣಪ್ಪ, ಮಾಳೇಟಿರ ಸೀತಮ್ಮ ವಿವೇಕ್ ಅವರು ಸಂಘಟನೆ ನಡೆದು ಬಂದ ಹಾದಿಯ ಕುರಿತು ಮಾತನಾಡಿದರು.

ಸಂಘಟನೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಸಣ್ಣ ಮಕ್ಕಳಿಗೆ ನಡೆದ ವಾಲಗತಾಟ್ ಪೈಪೋಟಿಯ ವಿಜೇತರ ಪಟ್ಟಿಯನ್ನು ಆಡಳಿತ ಮಂಡಳಿ ನಿರ್ದೇಶಕಿ ಹಾಗೂ ಪೈಪೋಟಿ ಸಂಚಾಲಕಿ ನೂರೆರ ಬಬಿತ ಅವರು ಬಿಡುಗಡೆ ಮಾಡಿದರು. ಸ್ಪರ್ಧೆಯಲ್ಲಿ ಒಟ್ಟು ೪೦ಮಕ್ಕಳು ಭಾಗವಹಿಸಿದ್ದರೆ ಪ್ರಥಮ ಬಹುಮಾನವನ್ನು ಮುಕ್ಕಾಟಿರ ಹಿತೈಷಿ ನಾಣಯ್ಯ, ದ್ವಿತೀಯ ಕಾಳಿಮಾಡ ದಿಂಶ ದೇಚಮ್ಮ ಹಾಗೂ ತೃತೀಯ ಮಚ್ಚಮಾಡ ಲಿಪಿಪೂವಮ್ಮ ಅವರು ಪಡೆದುಕೊಂಡರು. ತೀರ್ಪುಗಾರರಾಗಿ ಕದ್ದಣಿಯಂಡ ವಂದನ ಚಿಣ್ಣಪ್ಪ, ಮುಂಡೋಟಿರ ರಜನಿಜಯ, ಅಯ್ಯಲಪಂಡ ಕವಿತ ಅವರು ಕಾರ್ಯ ನಿರ್ವಹಿಸಿದರೆ, ನಗದು ಬಹುಮಾನವನ್ನು ಮಾಳೇಟಿರ ಸೀತಮ್ಮವಿವೇಕ್ ಅವರು ಪ್ರಾಯೋಜಿಸಿದರು.

ಕಾರ್ಯಕ್ರಮದಲ್ಲಿ ಪುಟ್ಟಮಕ್ಕಳಾದ ಕರವಂಡ ಪದ್ಮಿತ ಗಣಪತಿ, ಕರವಟ್ಟಿರ ಆರುಷಿ ಮುತ್ತಮ್ಮ, ಚಾಮೆರ ನಕ್ಷದೇಚಮ್ಮ, ಬೊಟ್ಟೋಳಂಡ ಕಶ್ವಿಕನ್ನಿಕೆ ಹಾಗೂ ಪೋಡಮಾಡ ಭವಾನಿ ನಾಣಯ್ಯ ಅವರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರೆ, ಆಪಾಡಂಡ ಜಗಮೊಣ್ಣಪ್ಪ ಅವರು ರಚಿಸಿ ಹಾಡಿದ ಕೊಡವಾಮೆರ ಕೊಂಡಾಟ ಸಂಘಟನೆಯ ಎರಡುವರ್ಷಗಳ ಸಾಧನೆ ಬಿಂಬಿಸುವ ಹಾಡಿನ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಸದಸ್ಯ ಚೆನಿಯಪಂಡ ಮನು ಮಂದಣ್ಣ ಅವರು ನೆಲ್ಲಕ್ಕಿಯಲ್ಲಿ ಒಕ್ಕಣೆ ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಆಡಳಿತ ಮಂಡಳಿ ನಿರ್ದೇಶಕ ಚಿರಿಯಪಂಡ ವಿಶು ಕಾಳಪ್ಪ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ಸಂಘಟನೆ ಕಳೆದೆರಡು ವರ್ಷಗಳಿಂದ ನಡೆಸಿದ ಕಾರ್ಯಕ್ರಮಗಳ ಪಟ್ಟಿ ಮಂಡಿಸಿದರೆ, ಆಡಳಿತ ಮಂಡಳಿ ನಿರ್ದೇಶಕ ಕುಂಞರ ಗಿರೀಶ್ ಭೀಮಯ್ಯ ವಂದಿಸಿದರು, ಸದಸ್ಯ ಮೇದುರ ಹಿತೇಶ್ ಪೂವಯ್ಯ ಅವರು ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರೆ, ಸದಸ್ಯ ಐಮುಡಿಯಂಡ ಕಿಶನ್ ಅಪ್ಪಯ್ಯ ಸಹಕರಿಸಿದರು.