ವೀರಾಜಪೇಟೆ, ಆ. ೨೪ : ಕೇಂದ್ರ ಸರಕಾರವು ಕಳೆದ ಜುಲೈ ೧ ರಿಂದ ಜಾರಿಗೆ ತಂದಿರುವ ಮಾರಾಟವಾಗುವ ಚಿನ್ನಾಭರಣಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಅಳವಡಿಸುವ ಹೊಸ ಮಸೂದೆಯ ನೀತಿಯಿಂದ ಸಣ್ಣ ಹಾಗೂ ಮಧ್ಯಮ ಚಿನ್ನಾಭರಣ ವರ್ತಕರಿಗೆ ಕುಶಲಕರ್ಮಿ ಕೆಲಸಗಾರರಿಗೆ ಮಾರಕವಾಗಲಿದೆ ಇದರಿಂದ ಗ್ರಾಹಕರಿಗಾಗಲಿ, ವರ್ತಕರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಸರಕಾರವು ಈ ಹೊಸ ನೀತಿಯನ್ನು ತಕ್ಷಣ ಹಿಂಪಡೆಯುವAತೆ ಜಿಲ್ಲಾ ಹಾಗೂ ವೀರಾಜಪೇಟೆ ತಾಲೂಕು ಚಿನ್ನ ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘ ಆಗ್ರಹಿಸುತ್ತದೆ ಎಂದು ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ತಿಳಿಸಿದರು.
ವೀರಾಜಪೇಟೆ ತಾಲೂಕು ಚಿನ್ನ ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ವತಿಯಿಂದ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ಅವರು ಭಾರತದಾದ್ಯಂತ ಇರುವ ಹರಳು, ಚಿನ್ನಾಭರಣ ಉದ್ಯಮವನ್ನು ಪ್ರತಿನಿಧಿಸುತ್ತಿರುವ ವರ್ತಕರಾದ ನಾವು ಸರಕಾರವು ಪ್ರಸ್ತುತ ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಗುಣಮಟ್ಟದ ಗುರುತನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಸ್ವಾಗತಿಸುತ್ತಿದ್ದು ಇದರಿಂದ ಖರೀದಿಸುವ ಚಿನ್ನಾಭರಣಗಳನ್ನು ಮರು ಮಾರಾಟ ಮಾಡುವಾಗಲೂ ಸೂಕ್ತ ಬೆಲೆಯನ್ನು ಒದಗಿಸಿ ಗ್ರಾಹಕರಿಗೆ ನಂಬಿಕೆ ಮತ್ತು ಸಂತೃಪ್ತಿಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಸಂಘದ ಅಧ್ಯಕ್ಷ ಕೆ.ಪಿ. ಪ್ರಶಾಂತ್ ಮಾತನಾಡಿ, ಸರಕಾರವು ಜಾರಿಗೆ ತಂದಿರುವ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ (ಎಚ್.ಯು.ಐ.ಡಿ.) ಗ್ರಾಹಕರ ಹಿತಾಸಕ್ತಿಗೆ ಹಾಗೂ ವರ್ತಕರ ಸರಾಗ ವಹಿವಾಟಿನ ತತ್ವಕ್ಕೆ ವಿರುದ್ಧವಾಗಿದೆ. ಸರಕಾರದ ಹೊಸ ನಿರ್ಬಂಧದ ನೀತಿ ಚಿನ್ನಾಭರಣದ ಗುಣಮಟ್ಟವನ್ನು ಉನ್ನತವಾಗಿ ಗುರುತಿಸುತ್ತಿರುವ ಹಾಲ್‌ಮಾರ್ಕ್ ಕೇಂದ್ರವನ್ನು ಹಾನಿಗೊಳಿಸುವ ಸಾಧ್ಯತೆ ಇದೆ. ಹಾಲ್‌ಮಾರ್ಕ್ ಕೇಂದ್ರಗಳಲ್ಲಿ ಈಗಾಗಲೇ ಟನ್‌ಗಟ್ಟಲೆ ಆಭರಣಗಳು ಬಾಕಿ ಇದ್ದು ಇವುಗಳಿಗೆ ಎಚ್.ಯು.ಐ.ಡಿ. ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ಅವರ ಆಭರಣಗಳನ್ನು ಸಕಾಲದಲ್ಲಿ ತಲುಪಿಸಲು ಸಾಧ್ಯವಾಗುವುದಿಲ್ಲ ಎಂದು ದೂರಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ಲೋಕೇಶ್ ಮಾತನಾಡಿ ಸರಕಾರದ ಹೊಸ ನೀತಿಯ ನಿರ್ಬಂಧವನ್ನು ತಕ್ಷಣ ಹಿಂಪಡೆಯದಿದ್ದರೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈಗಾಗಲೇ ತಾ. ೨೩ರಂದು ಕೊಡಗಿನ ಎಲ್ಲ ೩೦೦ ಮಂದಿಗೂ ಅಧಿಕ ವರ್ತಕರು ಕೇಂದ್ರ ಸರಕಾರದ ಹೊಸ ನೀತಿಯ ವಿರುದ್ಧ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ, ಇಂದು ತಾಲೂಕು ತಹಶೀಲ್ದಾರ್ ಅವರಿಗೂ ಈ ನೀತಿ ವಿರುದ್ಧ ವೀರಾಜಪೇಟೆ ತಾಲೂಕು ವರ್ತಕರು ತಮ್ಮ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಉಲ್ಲಾಸ್ ಶೇಟ್, ಖಜಾಂಚಿ ದಶರಥ, ಜಿಲ್ಲಾ ಸಮಿತಿಯ ಚೆಲ್ಲಾರಾಂ ಹಾಜರಿದ್ದರು.