ಸೋಮವಾರಪೇಟೆ, ಆ. ೨೪: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿನ ಬೇಳೂರಿನಲ್ಲಿರುವ ವಿಸ್ತಾರವಾದ ಬಾಣೆ ಪ್ರದೇಶ ಇದೀಗ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.
ಬೇಸಿಗೆಯಲ್ಲಿ ಒಣಗಿ ಕೆಂಬಣ್ಣಕ್ಕೆ ತಿರುಗಿದ್ದ ಹುಲ್ಲು ಗರಿಕೆಗಳು ಮಳೆಗೆ ಜೀವ ಕಳೆಯನ್ನು ಪಡೆದುಕೊಂಡಿದ್ದು, ಹಸಿರಿನ ಹಾಸಿಗೆಯಂತೆ ಕಂಗೊಳಿಸುತ್ತಿದೆ.
ಸುಮಾರು ೫೮ ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಬೇಳೂರು ಬಾಣೆಗೆ ಇತ್ತೀಚೆಗೆ ಪ್ರವಾಸಿಗರು ಅಧಿಕ ಸಂಖ್ಯೆಗಳಲ್ಲಿ ಆಗಮಿಸುತ್ತಿದ್ದು, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.
(ಮೊದಲ ಪುಟದಿಂದ) ಕುಶಾಲನಗರದಿಂದ ಸೋಮವಾರಪೇಟೆ, ಸೋಮವಾರಪೇಟೆಯಿಂದ ಕುಶಾಲನಗರ ಮಾರ್ಗದಲ್ಲಿ ಸಂಚರಿಸುವ ಹಲವಷ್ಟು ಮಂದಿ ಈ ಬಾಣೆಯಲ್ಲೊಂದು ಸುತ್ತು ಹಾಕಿ ವಿಶಾಲ ಮೈದಾನದಲ್ಲಿ ಕೆಲಹೊತ್ತು ಕುಳಿತು ಕಾಲ ಕಳೆಯುತ್ತಾರೆ.
ಬೇಳೂರು ಗಾಲ್ಫ್ ಕ್ಲಬ್‌ನ ನಿರ್ವಹಣೆ ಹೊಂದಿರುವ ಬೇಳೂರು ಬಾಣೆಯಲ್ಲಿ ಕೆಲವರು ಶುಚಿತ್ವಕ್ಕೆ ಆದ್ಯತೆ ನೀಡದೇ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಮದ್ಯದ ಬಾಟಲ್‌ಗಳನ್ನು ಎಸೆಯುತ್ತಿದ್ದುದನ್ನು ಮನಗಂಡು, ಮೈಸೂರಿನ ಇನ್ನರ್ ವೀಲ್ ಕ್ಲಬ್‌ನಿಂದ ಕಸದ ತೊಟ್ಟಿಗಳನ್ನು ಅಳವಡಿಸಲಾಗಿದೆ. ಆದರೂ ಸಹ ಕೆಲ ಅವಿವೇಕಿಗಳು ನೀರಿನ ಬಾಟಲ್, ಪ್ಲಾಸ್ಟಿಕ್‌ಗಳನ್ನು ಬಾಣೆಯಲ್ಲೇ ಎಸೆಯುತ್ತಿರುವುದು ಕಂಡುಬರುತ್ತಿದೆ.
ಇದರೊAದಿಗೆ ವಾಹನಗಳು ಒಳಗೆ ಪ್ರವೇಶಿಸದಂತೆ ಬಾಣೆಯ ಸುತ್ತಲೂ ಚರಂಡಿ ನಿರ್ಮಿಸಿದ್ದು, ಕೆಲ ದ್ವಿಚಕ್ರ ವಾಹನ ಸವಾರರು ಚರಂಡಿಯನ್ನೂ ಮೀರಿ ಬೈಕ್‌ಗಳನ್ನು ಬಾಣೆಯ ಒಳಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಜಾನುವಾರುಗಳಿಗೆ ಮೇವು ಒದಗಿಸುವಲ್ಲೂ ಈ ಬಾಣೆ ಪ್ರಮುಖ ಪಾತ್ರ ವಹಿಸಿದೆ. ಸುತ್ತಮುತ್ತಲಿನ ಕೃಷಿಕರು ತಮ್ಮ ಜಾನುವಾರುಗಳನ್ನು ಈ ಬಾಣೆಯಲ್ಲಿ ಮೇಯಲು ಬಿಡುತ್ತಾರೆ. ಗಾಲ್ಫ್ ಮೈದಾನವಾಗಿರುವ ಹಿನ್ನೆಲೆ ಬೇಳೂರು ಗಾಲ್ಫ್ ಕ್ಲಬ್‌ನಿಂದ ಹಲವಷ್ಟು ಪಂದ್ಯಾಟಗಳೂ ಈ ಮೈದಾನದಲ್ಲಿ ನಡೆದಿವೆ. ವಿಸ್ತಾರವಾದ ಬಾಣೆಯ ನಡುವೆ ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹಲವಷ್ಟು ಮಂದಿ ತಮ್ಮ ವಾಹನಗಳನ್ನು ಇಲ್ಲಿ ನಿಲುಗಡೆಗೊಳಿಸಿ ಪ್ರಕೃತಿಯ ಸೌಂದರ್ಯವನ್ನು ಮನಸಾರೆ ಸವಿದು ಮುಂದೆ ಸಾಗುತ್ತಾರೆ. ಬಾಣೆಯ ನಡುಭಾಗದ ಅಲ್ಲಲ್ಲಿ ಮರಗಳಿದ್ದು, ಇದರ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸಂಜೆ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಪ್ರಕೃತಿ ಪ್ರಿಯರು ಇಲ್ಲಿಗೆ ಭೇಟಿ ನೀಡುತ್ತಾರೆ. ತಂಪಾದ ಗಾಳಿಯೊಂದಿಗೆ ವಿಶಾಲವಾದ ಮೈದಾನದಲ್ಲಿ ಕೆಲಹೊತ್ತು ಕಾಲ ಕಳೆದು ಹಿಂತಿರುಗುತ್ತಿದ್ದಾರೆ.
- ವಿಜಯ್ ಹಾನಗಲ್