ಕುಶಾಲನಗರ, ಆ. ೨೫: ನಾಡಹಬ್ಬ ದಸರಾ ಉತ್ಸವಕ್ಕೆ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಬಳಕೆಗೆ ಅರಣ್ಯ ಇಲಾಖೆ ಪೂರ್ವ ತಯಾರಿ ನಡೆಸುತ್ತಿದೆ. ಕೊಡಗು ಜಿಲ್ಲೆಯ ದುಬಾರೆ, ಆನೆಕಾಡು, ಮತ್ತಿಗೋಡು ಹಾಗೂ ಮೈಸೂರು ಗಡಿ ಭಾಗದ ದೊಡ್ಡಹರವೆ ಶಿಬಿರ ಗಳಿಂದ ಆನೆಗಳ ಆಯ್ಕೆ ಈಗಾಗಲೇ ಮಾಡಲಾಗಿದ್ದು ಒಟ್ಟು ೧೪ ಆನೆಗಳ ಆಯ್ಕೆ ನಡೆದಿದೆ . ದುಬಾರೆ ಸಾಕಾನೆ ಶಿಬಿರದಿಂದ ವಿಕ್ರಮ' ವಿಜಯ, ಪ್ರಶಾಂತ, ಧನಂಜಯ, ಗೋಪಿ ಹರ್ಷ, ಕಾವೇರಿ, ಲಕ್ಷ್ಮಣ ಸೇರಿದಂತೆ ಒಟ್ಟು ೮ ಆನೆಗಳನ್ನು ಆಯ್ಕೆ ಮಾಡ ಲಾಗಿದೆ. ಕಳೆದ ವರ್ಷ ದಸರಾದಲ್ಲಿ ವಿಜಯ, ಹರ್ಷ, ಕಾವೇರಿ, ಗೋಪಿ ೪ ಆನೆಗಳು ಪಾಲ್ಗೊಂಡಿದ್ದವು.
ದುಬಾರೆ ಸಾಕಾನೆ ಶಿಬಿರದ ವಿಕ್ರಮ ೧೮ ವರ್ಷ ದಸರಾದಲ್ಲಿ ಪಾಲ್ಗೊಂಡಿದ್ದರೆ, ವಿಜಯ ಹದಿನೆಂಟು ವರ್ಷ ಪಾಲ್ಗೊಂಡಿತ್ತು. ಪ್ರಶಾಂತ ಹನ್ನೆರಡು ವರ್ಷ, ಹರ್ಷ ೧೩ ವರ್ಷಗಳ ಕಾಲ ದಸರಾದಲ್ಲಿ ಪಾಲ್ಗೊಂಡಿದ್ದರೆ, ಉಳಿದಂತೆ ಗೋಪಿ ೬ವರ್ಷ, ಕಾವೇರಿ ೮, ಧನಂಜಯ ೩ ಬಾರಿ ದಸರಾದಲ್ಲಿ ಪಾಲ್ಗೊಂಡ ಯಶಸ್ಸುಗಳಿಸಿವೆ.
ದುಬಾರೆ ಶಿಬಿರದ ೮ ಆನೆಗಳಲ್ಲಿ ಲಕ್ಷö್ಮಣ ಮಾತ್ರ ಈ ಬಾರಿ ತೆರಳಿದರೆ ಪ್ರಥಮ ಬಾರಿ ದಸರಾದಲ್ಲಿ ಪಾಲ್ಗೊಂಡತ್ತಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುಬಾರೆಯಿಂದ ಆಯ್ಕೆಗೊಂಡ ಆನೆಗಳಲ್ಲಿ ಹರ್ಷ ಮತ್ತು ವಿಜಯ ಅಲ್ಪ ಆರೋಗ್ಯ ಕ್ಷೀಣಿಸಿದ್ದು ಈ ಆನೆಗಳು ಈ ಬಾರಿಯ ದಸರಾಕ್ಕೆ ತೆರಳುವುದು ಬಹುತೇಕ ಸಂಶಯ ಎಂದು ಅರಣ್ಯ ಉಪ ವಲಯ ಅಧಿಕಾರಿ ಕನ್ನಂಡ ರಂಜನ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು ಜತೆಗೆ ಈ ಬಾರಿ ಭೀಮ ಪ್ರಥಮ ಬಾರಿಗೆ ಆನೆ ತೆರಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮೈಸೂರು ಜಿಲ್ಲೆಯ ಗಡಿ ಭಾಗದ ದೊಡ್ಡಹರವೆ ಶಿಬಿರದಿಂದ ಅಶ್ವತ್ಥಾಮ ಆನೆ ದಸರಾಕ್ಕೆ ಆಯ್ಕೆಯಾಗಿದೆ. ಸರಳ ದಸರಾ ಆಚರಿಸಲು ನಿರ್ಧರಿಸಿದರೆ ಒಟ್ಟು ೧೪ ಆನೆಗಳಲ್ಲಿ ೭ಆನೆಗಳನ್ನು ಮಾತ್ರ ಆರಿಸಿ ಕಳಿಸಿ ಕೊಡಲಾಗುವುದು ಎಂಬ ಮಾಹಿತಿಯೂ ಹೊರಬಿದ್ದಿದೆ.
ಕಳೆದ ಬಾರಿ ಒಟ್ಟು ೫ ಆನೆಗಳನ್ನು ದಸರಾದಲ್ಲಿ ಬಳಸಿಕೊಂಡಿದ್ದು, ಅವುಗಳಲ್ಲಿ ಜಿಲ್ಲೆಯ ದುಬಾರೆ ೪ ಆನೆಗಳು ಪಾಲ್ಗೊಂಡಿದ್ದವು. ದುಬಾರೆಯ ವಿಜಯ, ಗೋಪಿ, ಹರ್ಷ, ಕಾವೇರಿ ಕಳೆದ ಬಾರಿ ಪಾಲ್ಗೊಂಡ ಆನೆಗಳು. ಸರಳವಾಗಿ ದಸರಾ ಆಚರಿಸಿದಲ್ಲಿ ಆನೆಗಳನ್ನು ಜಂಬೂಸವಾರಿಗೆ ಇಪ್ಪತ್ತೆöÊದು ದಿನಗಳ ಮುನ್ನ ಕರೆತರಲಾಗುವುದು, ಅದ್ಧೂರಿ ದಸರಾ ಆಚರಿಸಿದಲ್ಲಿ ನಲ್ವತ್ತು ದಿನಗಳ ಮುಂಚೆ ಕರೆದುಕೊಂಡು ತಾಲೀಮು ನಡೆಸಲಾಗುತ್ತದೆ. ಆದರೆ ಈ ಬಾರಿ ಅಕ್ಟೋಬರ್ ತಿಂಗಳಲ್ಲಿ ದಸರಾ ಆಚರಣೆಯಾಗಲಿದ್ದು, ಆ ಸಂದರ್ಭ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಮುನ್ಸೂಚನೆ ತಜ್ಞರು ನೀಡಿದ್ದಾರೆ.
ಹೀಗಾಗಿ ಈ ಬಾರಿ ಕೂಡ ಕಳೆದ ಬಾರಿಯಂತೆ ಅರಮನೆ ಆವರಣಕ್ಕೆ ಜಂಬೂಸವಾರಿ ಸೀಮಿತ ಗೊಳ್ಳುವ ಸಾಧ್ಯತೆ ಬಹುತೇಕ ಇದೆ. ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಆರೋಗ್ಯ ತಪಾಸಣೆ ಈಗಾಗಲೇ ನಡೆಸಲಾಗಿದೆ. ಎಲ್ಲಾ ಆನೆಗಳು ಆರೋಗ್ಯಕರವಾಗಿದ್ದು ಪಟ್ಟಿಮಾಡಿರುವ ಆನೆಗಳ ಹೆಸರನ್ನು ಅಂತಿಮಗೊಳಿಸಲು ಈ ತಿಂಗಳ ಅಂತ್ಯದೊಳಗೆ ಹಿರಿಯ ಅಧಿಕಾರಿಗಳ ವಿಶೇಷ ಸಭೆ ಮೈಸೂರಿನಲ್ಲಿ ನಡೆಯಲಿದೆ. ಅದಾದ ನಂತರ ಆನೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾ ಗುವುದು ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.
ಈಗಾಗಲೇ ಒಟ್ಟು ೧೪ ಆನೆಗಳ ಪಟ್ಟಿಯನ್ನು ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಿದ್ದು ಅನುಮೋದನೆಗೆ ಕಾಯಲಾಗುತ್ತಿದೆ. ಅನುಮೋದನೆ ದೊರೆತ ಬೆನ್ನಲ್ಲೇ ಶಿಬಿರದಿಂದ ಮೈಸೂರು ನಗರಕ್ಕೆ ಗಜಪಡೆ ಕಳುಹಿಸಿಕೊಡಲು ಶಿಬಿರಗಳಲ್ಲಿ ಎಲ್ಲ ರೀತಿಯ ಪೂರ್ವ ಸಿದ್ಧತೆ ನಡೆಯುತ್ತಿದೆ.
ಈಗಾಗಲೇ ವನ್ಯಜೀವಿ ತಜ್ಞರು ಆನೆಗಳ ಆರೋಗ್ಯ ತಪಾಸಣೆ ಕೈಗೊಂಡಿರುವುದಾಗಿ ಇಲಾಖೆ ಮೂಲಗಳು ತಿಳಿಸಿವೆ. ನಾಡಹಬ್ಬ ದಸರಾ ಉತ್ಸವಕ್ಕೆ ಒಟ್ಟು ೧೪ಆನೆಗಳನ್ನು ಆಯ್ಕೆ ಮಾಡಲಾಗಿದ್ದು ಸರಳ ದಸರಾ ಆಚರಿಸಿದರೆ ಈ ಬರೀ ೭ ಆನೆಗಳನ್ನು ಮಾತ್ರ ಬಳಕೆ ಮಾಡಲಾಗುವುದು. ಸರ್ಕಾರ ಕೈಗೊಳ್ಳುವ ತೀರ್ಮಾನದ ಮೇರೆಗೆ ದಸರಾ ಗಜಪಡೆಯನ್ನು ಸಜ್ಜುಗೊಳಿಸಲು ಬೇಕಾದ ತಯಾರಿ ಎಲ್ಲ ಶಿಬಿರಗಳಲ್ಲಿ ನಡೆಯುತ್ತಿದೆ.
-ಚಂದ್ರಮೋಹನ್