ಕೇರಳದಲ್ಲಿ ೩೧,೪೪೫ ಮಂದಿಗೆ ಕೊರೊನಾ

ತಿರುವನಂತಪುರA, ಆ. ೨೫: ಕೇರಳದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಬ್ಬರ ಹೆಚ್ಚುತ್ತಿದ್ದು, ಬುಧವಾರ ಬರೋಬ್ಬರಿ ೩೧,೪೪೫ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇವರ ನಾಡಿನಲ್ಲಿ ಸೋಂಕಿತರ ಸಂಖ್ಯೆ ೩೮,೮೩,೪೨೯ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಇಂದು ೨೧೫ ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ೧೯,೯೭೨ಕ್ಕೆ ತಲುಪಿದೆ. ಮೇ ೨೦ ರಂದು ೩೦,೪೯೧ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಈಗ ಎರಡನೇ ಬಾರಿಗೆ ೩೦,೦೦೦ ಗಡಿ ದಾಟಿದೆ. ಇನ್ನೂ ನೆರೆಯ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ (ಟಿಪಿಆರ್) ಮತ್ತಷ್ಟು ಏರಿಕೆಯಾಗಿದ್ದು, ಶೇ. ೧೯ ರ ಗಡಿ ದಾಟಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಓಣಂ ಹಬ್ಬದ ನಂತರ, ವೈದ್ಯಕೀಯ ತಜ್ಞರು ಟಿಪಿಆರ್ ಶೇ. ೨೦ ಕ್ಕಿಂತ ಹೆಚ್ಚಾಗುತ್ತದೆ ಮತ್ತು ಸೋಂಕುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಜುಲೈ ೨೭ ರಿಂದ, ಕೆಲವು ದಿನಗಳವರೆಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ, ಬಕ್ರೀದ್ ಬಳಿಕ ಕೇರಳದಲ್ಲಿ ಪ್ರತಿ ದಿನ ೨೦,೦೦೦ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ.

ರಾಜ್ಯದಲ್ಲಿ ಮುಂದುವರೆದ ಕೊರೊನಾ ಏರಿಳಿತ

ಬೆಂಗಳೂರು, ಆ. ೨೫: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಇಂದು ೧,೨೨೪ ಕೊರೊನಾ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೯,೪೨,೨೫೦ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೨೨ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೭,೨೦೬ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೩೦೯ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೩೫,೯೧೦ಕ್ಕೆ ಏರಿಕೆಯಾಗಿದೆ. ಇನ್ನು ೩ ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು ೧,೬೬೮ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೮೫,೭೦೦ಕ್ಕೆ ಏರಿಕೆಯಾಗಿದೆ. ೧೯,೩೧೮ ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೯೫,೯೬೬ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧,೨೨೪ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೦.೬೨ಕ್ಕೆ ಇಳಿದಿದೆ.

ರೈತರ ಆದಾಯ ದ್ವಿಗುಣ: ಕಾರ್ಯತಂತ್ರ ರೂಪಿಸಲು ರೈತರ ಸಮಿತಿ

ಬೆಂಗಳೂರು, ಆ. ೨೫: ಕರ್ನಾಟಕ ರಾಜ್ಯವು ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉತ್ಸುಕವಾಗಿದ್ದು, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಟವಾಗಿ ಹಮ್ಮಿಕೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ವರದಿ ಸಲ್ಲಿಸಲು ರೈತರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಗೃಹ ಕಚೇರಿ ಕೃಷ್ಣಾದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ದಳವಾಯಿ ಅವರ ವರದಿಯ ಮುಖ್ಯಾಂಶಗಳ ಕುರಿತು ಪ್ರಾತ್ಯಕ್ಷಿಕೆ ಹಾಗೂ ಚರ್ಚೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಇಂದು ಕೃಷಿ ಉತ್ಪಾದನೆ ಕೇಂದ್ರಿತವಾಗಿದ್ದು, ಆದಾಯ ಕೇಂದ್ರಿತವಾಗಬೇಕಿದೆ. ಇದಲ್ಲದೆ, ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಿರಬೇಕು. ರಾಜ್ಯದ ಕೃಷಿ ವಲಯದಲ್ಲಿ ಬೀಜ, ಗೊಬ್ಬರ ಹಾಗೂ ಕೀಟಗಳ ನಿರ್ವಹಣೆಗೆ ಕೃಷಿ ವಿಶ್ವವಿದ್ಯಾಲಯಗಳ ನೆರವಿನಿಂದ ಕ್ರಮ ವಹಿಸಲು, ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೃಷಿ, ತೋಟಗಾರಿಕೆ, ಡೈರಿ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ ಹಾಗೂ ಗ್ರಾಮೀಣ ಮತ್ತು ಗುಡಿ ಕೈಗಾರಿಕೆಯ ಮೂಲಕ ರೈತರಿಗೆ ಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಜನೆಗೆ ಪೂರಕವಾಗಿ ಸೆಕೆಂಡರಿ ಅಗ್ರಿಕಲ್ಚರ್ (ಡೈರೆಕ್ಟೊರೇಟ್) ನಿರ್ದೇಶನಾಲ ಯವನ್ನು ಸ್ಥಾಪಿಸಲಾಗುವುದು. ಇದರಿಂದ ಕೃಷಿ ಉತ್ಪನ್ನಗಳಿಂದ ಉಪ ಕೃಷಿ ಉತ್ಪನ್ನ ತಯಾರಿಸಲಾಗುವುದು. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಒಟ್ಟಾರೆ ರೈತರ ಆದಾಯ ಹೆಚ್ವುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕಾ ಸಚಿವ ಮುನಿರತ್ನ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ವೈದ್ಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಮೈಸೂರು, ಆ. ೨೫: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತನ ಜೊತೆ ವಿದ್ಯಾರ್ಥಿನಿ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾಳೆ. ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ನಿರ್ಜನ ಪ್ರದೇಶಕ್ಕೆ ನಿನ್ನೆ ಸಂಜೆ ಇಬ್ಬರು ತೆರಳಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ೬ ಮಂದಿ ದುಷ್ಕರ್ಮಿಗಳು ಯುವಕನಿಗೆ ಹಲ್ಲೆ ಮಾಡಿ ನಂತರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರದ ಬಳಿಕ ವಿದ್ಯಾರ್ಥಿನಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಂಬAಧ ಆಲನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.