ಮಡಿಕೇರಿ, ಆ. ೨೫: ನಗರದ ಕಾವೇರಿ ಮಹಲ್ ಕಾಂಪ್ಲೆಕ್ಸ್ನಲ್ಲಿ ಹೆಚ್ಚುವರಿಯಾಗಿ ನಿರ್ಮಾಣಗೊಂಡಿದ್ದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ನಗರಸಭೆ ವತಿಯಿಂದ ನಡೆಯಿತು. ತೆರವು ಕಾರ್ಯಾಚರಣೆ ವೇಳೆ ಕಟ್ಟಡದ ಗುತ್ತಿಗೆದಾರ ಹಾಗೂ ನಗರಸಭಾ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಹೆಚ್ಚುವರಿ ಕಟ್ಟಡಕ್ಕೆ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ವಾದಿಸಿದರೆ, ಅನುಮತಿ ಇದೆ ಎಂದು ಗುತ್ತಿಗೆದಾರ ಸಮರ್ಥಿಸುತ್ತಿದ್ದುದು ಕಂಡುಬAತು. ಕೊನೆಗೆ ಹೆಚ್ಚುವರಿಯಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡವನ್ನು ಪೊಲೀಸ್ ಬಂದೋಬಸ್ತ್ ನಡುವೆ ತೆರವುಗೊಳಿಸಲಾಯಿತು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಸಭಾ ಆಯುಕ್ತ ರಾಮದಾಸ್ ಅವರು, ಕಾವೇರಿ ಮಹಲ್ ಕಾಂಪ್ಲೆಕ್ಸ್ನಲ್ಲಿ ಪರವಾನಗಿ ಪಡೆಯದೆ ಕಟ್ಟಡ ನವೀಕರಣ ಮಾಡಲಾಗುತ್ತಿದೆ. ಜೊತೆಗೆ ಹೆಚ್ಚುವರಿಯಾಗಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಬಗ್ಗೆ ೩ ಬಾರಿ ನೋಟೀಸ್ ನೀಡಿದರೂ, ಸಂಬAಧಿಸಿದವರು ಯಾವುದೇ ಉತ್ತರ ನೀಡದೆ ಕಾನೂನು ಹೋರಾಟಕ್ಕೆ ಮುಂದಾದರು. ಆದ್ದರಿಂದ ನಾವು ಕೂಡ ಕಾನೂನು ಹೋರಾಟಕ್ಕೆ ಇಳಿದಿದ್ದೆವು. ಈ ನಡುವೆ ಇಂದು ಸಂಬAಧಿಸಿದ ಕಟ್ಟಡ ಮಾಲೀಕರು ತಡೆಯಾಜ್ಞೆ ತರುವುದಾಗಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತೆರವು ಕಾರ್ಯಕ್ಕೆ ನಗರಸಭೆ ಮುಂದಾಗಿದೆ ಎಂದು ಹೇಳಿದರು. ಕಟ್ಟಡಕ್ಕೆ ಈ ಹಿಂದೆ ಟ್ರೇಡ್‌ಲೈಸೆನ್ಸ್ ನೀಡಲಾಗಿತ್ತಾದರೂ ಅದನ್ನು ಈಗಾಗಲೇ ರದ್ದು ಮಾಡಲಾಗಿದೆ ಎಂದು ರಾಮದಾಸ್ ತಿಳಿಸಿದರು.

ಗುತ್ತಿಗೆದಾರ ಹಾಸಿಂ ಮಾತನಾಡಿ, ಕಟ್ಟಡ

(ಮೊದಲ ಪುಟದಿಂದ) ಕಾಮಗಾರಿಗಾಗಿ ತಾನು ನಗರಸಭೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರೂ ಕೂಡ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ತಾನು ಕಾಮಗಾರಿ ಪ್ರಾರಂಭಿಸಿದೆ. ಪರವಾನಗಿಗಾಗಿ ಅರ್ಜಿ ಸಲ್ಲಿಸಿ ೩೦ ದಿನಗಳೊಳಗೆ ಆ ಅರ್ಜಿಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ, ನಾವು ಸಲ್ಲಿಸಿರುವ ಅರ್ಜಿಯೆ ನಮಗೆ ಪರವಾನಗಿಯಾಗಿರುತ್ತದೆ ಎಂದು ನಗರಸಭಾ ಕಾಯ್ದೆಯಲ್ಲಿ ಉಲ್ಲೇಖಿಸಿದ್ದು, ಅದರಂತೆ ನಾವು ಕಾಮಗಾರಿ ಪ್ರಾರಂಭಿಸಿದೆವು. ಈ ನಡುವೆ ನಗರಸಭೆಯ ಕೆಲ ಬಿಜೆಪಿ ಸದಸ್ಯರು ಆಯುಕ್ತರ ಮೇಲೆ ಒತ್ತಡ ಹೇರಿ ಕಟ್ಟಡ ತೆರವಿಗೆ ಮುಂದಾಗಿದ್ದಾರೆ ಎಂದು ದೂರಿದರು. ಟ್ರೇಡ್ ಲೈಸೆನ್ಸ್ ರದ್ದುಗೊಳಿಸಿರುವ ಬಗ್ಗೆ ತನಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದ ಹಾಸಿಂ ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಅನಧಿಕೃತ ಕಟ್ಟಡಗಳಿದ್ದು, ಅವುಗಳನ್ನು ತೆರವು ಮಾಡಬೇಕು. ನಗರಸಭಾ ಸದಸ್ಯರಲ್ಲಿ ಕೆಲವರು ತಮ್ಮ ಮನೆಗಳನ್ನು ನಿಯಮ ಉಲ್ಲಂಘಿಸಿ ಕಟ್ಟಿಕೊಂಡಿದ್ದು, ತಮ್ಮ ಕಟ್ಟಡ ತೆರವುಗೊಳಿಸಿರುವ ಬಗ್ಗೆ; ನಗರದಲ್ಲಿರುವ ಅನಧಿಕೃತ ಕಟ್ಟಡ ತೆರವುಗೊಳಿಸುವ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭ ನಗರಸಭಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.