ಮಡಿಕೇರಿ, ಆ. ೨೫: ‘ಮೈಂಡ್ ಆ್ಯಂಡ್ ಮ್ಯಾಟರ್’ ಸಂಸ್ಥೆ ವತಿಯಿಂದ ರಕ್ಷಾ ಬಂಧನ ಪ್ರಯುಕ್ತ ರೂ.೧೦,೦೦೦ ಬೆಲೆಬಾಳುವ ಪುಸ್ತಕ ಹಾಗೂ ಕಾದಂಬರಿಗಳನ್ನು ಮಡಿಕೇರಿಯ ೩ ಮಕ್ಕಳ ಆಸರೆ ಗೃಹಗಳ ಒಟ್ಟು ೯೦ ಮಕ್ಕಳಿಗೆ ಕೊಡುಗೆಯಾಗಿ ನೀಡಲಾಯಿತು. ರಕ್ಷಾ ಬಂಧನ ಪ್ರಯುಕ್ತ ಆಸರೆ ಗೃಹಗಳಿಗೆ ತೆರಳಿ ಪರಿಸರ ಸ್ನೇಹಿ ರಾಖಿಯನ್ನು ಮಕ್ಕಳಿಗೆ ಕಟ್ಟಲಾಯಿತು.
ಈ ಪರಿಸರ ಪ್ರೇಮಿ ರಾಖಿಯ ಬಳಕೆ ನಂತರ ಅದನ್ನು ನೆಡಬಹುದಾಗಿದ್ದು ಆಸರೆ ಗೃಹಗಳ ಸುತ್ತಮುತ್ತ ನೆಟ್ಟ ಗಿಡವನ್ನು ಪೋಷಿಸಲು ಮಕ್ಕಳು ಕುತೂಹಲದಿಂದಿದ್ದಾರೆ. ಇನ್ನು ಎರಡು ವಾರಗಳಲ್ಲೇ ರಾಖಿಗಳಲ್ಲಿನ ಬೀಜ ಬಿತ್ತನೆ ಮಾಡುವ ಕಾರ್ಯ ಮಾಡಲಾಗುವುದಾಗಿ ಸಂಸ್ಥೆಯ ಪ್ರಮುಖರಾದ ದೀಪಿಕಾ ಎಮ್.ಎ ಅವರು ತಿಳಿಸಿದ್ದಾರೆ.
ಸಂಸ್ಥೆಯ ವತಿಯಿಂದ ಮಕ್ಕಳಿಗೆ ಬಳಕೆಯಾಗುವಂತಹ ಪುಸ್ತಕಗಳನ್ನು ಸಂಗ್ರಹಿಸಲಾಗುತ್ತಿದ್ದು, ಗ್ರಂಥಾಲಯ ಸ್ಥಾಪನೆಗೆ ಚಿಂತಿಸಲಾಗಿದೆ. ೩ ಆಸರೆ ಗೃಹಗಳಲ್ಲಿ ಗ್ರಂಥಾಲಯ ಸ್ಥಾಪಿಸಿ ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕೆಂಬುದೇ ಉದ್ದೇಶವಾಗಿದ್ದು, ಪುಸ್ತಕಗಳನ್ನು ನೀಡಲು ಬಯಸುವವರು ಮೈಸೂರಿನ ರಾಯ್ಸ್ ಕೆಫೆ, ಬೆಂಗಳೂರಿನ ‘ಈಟ್ ರಾಜಾ’ ಹಾಗೂ ಮಂಗಳೂರಿನ ಮಂಡಲ ಕೆಫೆಗಳಲ್ಲಿ ಪುಸ್ತಕಗಳನ್ನು ದಾನವಾಗಿ ನೀಡಬಹುದು. ಈ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸಲಾಗುವುದಾಗಿ ದೀಪಿಕಾ ಅವರು ಮಾಹಿತಿ ನೀಡಿದ್ದಾರೆ.