ವೀರಾಜಪೇಟೆ, ಆ. ೨೫: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗೋಣಿಕೊಪ್ಪಲು ರೋಟರಿ ಕ್ಲಬ್‌ನಿಂದ ೨೦ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಮಹಿಳಾ ಸಮಾಜದಲ್ಲಿ ಜರುಗಿದ ಸಮಾರಂಭದಲ್ಲಿ ರೋಟರಿ ವಲಯ ೬ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಗೋಣಿಕೊಪ್ಪಲು ರೋಟರಿ ವತಿಯಿಂದ ನೀಡಲಾದ ೨೦ ಕಂಪ್ಯೂಟರ್‌ಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅನಿಲ್ ಎಚ್.ಟಿ, ರೋಟರಿ ಸಂಸ್ಥೆಯು ವಿಶ್ವದಾದ್ಯಂತ ೨೫೦ ದೇಶಗಳಲ್ಲಿ ೩೫ ಸಾವಿರ ಸಂಸ್ಥೆಗಳನ್ನು ಹೊಂದಿದ್ದು, ಶಿಕ್ಷಣ ಮತ್ತು ಆರೋಗ್ಯ ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದೆ. ರೋಟರಿ ಜಿಲ್ಲೆ ೩೧೮೧ ರ ಮೂಲಕ ಇದೀಗ ರಾಜ್ಯವ್ಯಾಪಿ ಅಗತ್ಯವಿರುವ ಕಾಲೇಜುಗಳಿಗೆ ೧೨,೫೦೦ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದ್ದು, ಅಂತೆಯೇ ಕೊಡಗಿನಲ್ಲಿಯೂ ವೀರಾಜಪೇಟೆ, ಮಡಿಕೇರಿ, ನಾಪೋಕ್ಲು, ಕುಶಾಲನಗರ, ಸೋಮವಾರಪೇಟೆ ಕಾಲೇಜುಗಳಿಗೆ ೭೫ ಕಂಪ್ಯೂಟರ್‌ಗಳನ್ನು ವಿತರಿಸ ಲಾಗುತ್ತಿದೆ. ಹೆಲ್ಪ್ ಎಜ್ಯುಕೇಷನ್ ಯೋಜನೆಯಡಿ ಈ ಕಂಪ್ಯೂಟರ್‌ಗಳು ವಿತರಣೆಯಾಗುತ್ತಿವೆ ಎಂದು ಮಾಹಿತಿ ನೀಡಿದರಲ್ಲದೇ, ಕಾಲೇಜು ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.

ಗೋಣಿಕೊಪ್ಪಲು ರೋಟರಿ ಅಧ್ಯಕ್ಷೆ ತೀತಮಾಡ

(ಮೊದಲ ಪುಟದಿಂದ) ನೀತಾ ಕಾವೇರಮ್ಮ ಮಾತನಾಡಿ, ದಾನಿಗಳ ಸಹಕಾರದಿಂದ ೨೦ ಕಂಪ್ಯೂಟರ್‌ಗಳನ್ನು ಗೋಣಿಕೊಪ್ಪ ರೋಟರಿ ಮೂಲಕ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಬೇಡಿಕೆಗಳಿಗೆ ಗೋಣಿಕೊಪ್ಪ ರೋಟರಿ ತನ್ನ ಸದಸ್ಯರ ಮೂಲಕ ಸದಾ ಸ್ಪಂದಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ, ಕಾಲೇಜಿನ ಅಗತ್ಯವನ್ನು ಗಮನಿಸಿ ಕಂಪ್ಯೂಟರ್ ವಿತರಿಸಿದ ರೋಟರಿ ಸೇವಾ ಕಾರ್ಯ ಪ್ರಶಂಶಿಸಿದರಲ್ಲದೇ, ವೀರಾಜಪೇಟೆ ಗ್ರಂಥಾಲಯಕ್ಕೆ ಅಗತ್ಯವಿರುವ ಪುಸ್ತಕಗಳನ್ನೂ ರೋಟರಿ ಮೂಲಕ ನೀಡುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ, ದಾನಿಗಳಾದ ಮೇಚಂಡ ಬೋಸ್ ಚಂಗಪ್ಪ, ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ಕಾಲೇಜು ಉಪನ್ಯಾಸಕ ವೇಣುಗೋಪಾಲ್ ಹಾಜರಿದ್ದರು. ಗೋಣಿಕೊಪ್ಪ ರೋಟರಿ ಕ್ಲಬ್ ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ ವಂದಿಸಿದರು.