ಮಡಿಕೇರಿ, ಆ. ೨೫: ಒಂದೊಮ್ಮೆ ಕೊಡಗು ಜಿಲ್ಲೆಯಲ್ಲಿ ಸಂಬಾರ ರಾಣಿ ಎಂದೇ ಪರಿಗಣಿಸಲ್ಪಟ್ಟಿರುವ ಏಲಕ್ಕಿ ಬೆಳೆ ಉಚ್ರಾಯ ಸ್ಥಿತಿಯಲ್ಲಿತ್ತು. ಕೊಡಗಿನ ಏಲಕ್ಕಿ ಎಂದರೆ ಅದಕ್ಕೆ ಒಂದಷ್ಟು ವಿಶಿಷ್ಟವಾದ ಬೇಡಿಕೆಯೂ ಹೆಚ್ಚಿದ್ದದ್ದು ಹಿಂದಿನ ವರ್ಷಗಳ ಮೆಲುಕಾಗಿದೆ. ಆದರೆ ಕಾಲಾನುಕ್ರಮದಲ್ಲಿ ಸಾಂಪ್ರದಾಯಿಕವಾಗಿ ಏಲಕ್ಕಿ ಬೆಳೆಯುತ್ತಿದ್ದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಏಲಕ್ಕಿ ಫಸಲು ಕ್ಷೀಣಿಸುತ್ತಾ ಬಂದಿತ್ತು. ವಾತಾವರಣದಲ್ಲಿನ ಏರುಪೇರು, ಪರಿಣಿತ ಕಾರ್ಮಿಕರ ಕೊರತೆ, ಬೆಲೆ ತೀರಾ ನೆಲಕಚ್ಚಿದ್ದು, ನಿರ್ವಹಣಾ ವೆಚ್ಚ ಅತ್ಯಧಿಕ... ಈ ರೀತಿಯ ಹಲವಾರು ಕಾರಣಗಳಿಂದಾಗಿ ಕ್ರಮೇಣ ಬೆಳೆಗಾರರು ಏಲಕ್ಕಿ ಬೆಳೆಯ ಬಗ್ಗೆ ನಿರಾಸಕ್ತಿ ತೋರಿದ್ದರು. ಕಟ್ಟೆರೋಗ ಸೇರಿದಂತೆ ರೋಗಭಾದೆಯಿಂದಲೂ ಏಲಕ್ಕಿ ಕೊಡಗಿನಲ್ಲಿ ಅಧಃಪತನದತ್ತ ಸಾಗಿತ್ತು.ಇದೀಗ ಏಲಕ್ಕಿಗೆ ನಿರೀಕ್ಷಿತಮಟ್ಟದ ಬೆಲೆ ಕೂಡ ಸಿಗುತ್ತಿಲ್ಲ. ಆದರೆ, ಈ ಬೆಳೆಯನ್ನು ಉಳಿಸಿಕೊಂಡು, ಒಂದಷ್ಟು ಸುಧಾರಣೆಯನ್ನು ಮಾಡಿಕೊಂಡಲ್ಲಿ ಮುಂದೊAದು ದಿನ ಏಲಕ್ಕಿಗೆ ಉತ್ತಮ ಭವಿಷ್ಯ ಬರಬಹುದು ಎಂಬ ಆಶಾಭಾವನೆಯಿಂದ ಪ್ರಸ್ತುತ ಜಿಲ್ಲೆಯ ಹಲವೆಡೆಗಳಲ್ಲಿ ಬೆಳೆಗಾರರು ಏಲಕ್ಕಿ ಕೃಷಿಯತ್ತ ತುಸು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಈ ಆಸಕ್ತಿ ಮೂಡಲು ಇಲ್ಲಿ ಮತ್ತೊಂದು ಕಾರಣವೂ ಇದೆ. ಕಳೆದ ಒಂದೆರಡು ವರ್ಷಗಳ ಹಿಂದೆ ದೇಶದಲ್ಲಿ ಏಲಕ್ಕಿ ಉತ್ಪಾದನೆ ತೀರಾ ಕುಂಠಿತವಾಗಿದ್ದು, ಬೆಳೆಗಾರರು ನಿರೀಕ್ಷಿಸದ ಮಾದರಿಯಲ್ಲಿ ಏಲಕ್ಕಿಗೆ ಭಾರೀ ಬೆಲೆ ಕಂಡುಬAದಿತ್ತು. ಬೇಡಿಕೆಗೆ ತಕ್ಕಂತೆ ಏಲಕ್ಕಿ ಇಲ್ಲದ ಪರಿಣಾಮ ಧಾರಣೆ ಊಹಿಸದ ಮಾದರಿಯಲ್ಲಿ ಹೆಚ್ಚಾಗಿತ್ತು. ೨೦೧೮-೧೯ರಲ್ಲಿ ಪ್ರತಿ ಕೆಜಿಗೆ ಸುಮಾರು ಮೂರೂವರೆ ಸಾವಿರದಿಂದ ನಾಲ್ಕು ಸಾವಿರಕ್ಕೂ ಅಧಿಕ ಬೆಲೆ ಬಂದಿತ್ತು. ೨೦೧೮ರಲ್ಲಿ ಕರ್ನಾಟಕದ ಮಲೆನಾಡು ಪ್ರದೇಶಗಳು ಸೇರಿದಂತೆ ಕೇರಳದಲ್ಲಿ ಜಲಪ್ರಳಯ ಉಂಟಾಗಿದ್ದ ಸನ್ನಿವೇಶದಿಂದಾಗಿ ಏಲಕ್ಕಿ ಫಸಲು ನಾಶವಾಗಿದ್ದು ಕೂಡ ಇದಕ್ಕೆ ಮತ್ತೊಂದು ಕಾರಣ. ಈ ಬೆಲೆ ಏರಿಕೆಯ ಪರಿಣಾಮವೋ ಎಂಬAತೆ ಇದೀಗ ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಕೃಷಿಕರು ಏಲಕ್ಕಿ ಬೆಳೆಗೆ ಮರುಜೀವ ನೀಡಲು ಉತ್ಸುಕತೆ ತೋರುತ್ತಿರುವುದು ಕಂಡುಬರುತ್ತಿದೆ. ಆದರೂ, ೨೦೧೯-೨೦ನೇ ಸಾಲಿಗೆ ಹೋಲಿಸಿದರೆ ಬೆಳೆ ಶೇ. ೬.೪೧ರಷ್ಟು ಕಡಿಮೆ ಇದೆ ಎಂಬುದೂ ಗಮನಾರ್ಹ ವಿಚಾರವಾಗಿದೆ. ಇದೀಗ ಪ್ರಮುಖವಾಗಿ ಸೋಮವಾರಪೇಟೆ ತಾಲೂಕಿನ ಹಲವು ಭಾಗ ಮಡಿಕೇರಿ ತಾಲೂಕಿನ ಕೆಲವೆಡೆಗಳಲ್ಲಿ ಸಾಂಪ್ರದಾಯಿಕವಾಗಿ ಏಲಕ್ಕಿ ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಒಂದಷ್ಟು ಸುಧಾರಣೆ ಕಂಡುಬರುತ್ತಿರುವುದಾಗಿ ಹೇಳಲಾಗುತ್ತಿದೆ. ತಾಕೇರಿ, ಬಾಚಳ್ಳಿ, ಕುಮಾರಳ್ಳಿ, ಕೊತ್ನಳ್ಳಿ, ಗರ್ವಾಲೆ, ಸೂರ್ಲಬ್ಬಿ, ಶಾಂತಳ್ಳಿ, ಮಕ್ಕಂದೂರು, ಸುಂಟಿಕೊಪ್ಪ ಭಾಗಗಳಲ್ಲಿ ಬೆಳೆಗಾರರು ಒಂದಷ್ಟು ಹೆಚ್ಚಿಗೆ ಏಲಕ್ಕಿಯನ್ನು ಬೆಳೆಯಲು ಮುಂದಾಗಿರುವುದು ಕಂಡುಬರುತ್ತಿದೆ. ಆದರೆ, ಭಾಗಮಂಡಲ ವಿಭಾಗ ಸೇರಿದಂತೆ ದಕ್ಷಿಣ ಕೊಡಗಿನಲ್ಲಿ ಈ ಹಿಂದೆ ಸಾಂಪ್ರದಾಯಿಕವಾಗಿ ಬೆಳೆ ಬೆಳೆಯುತ್ತಿದ್ದ ಕಡೆಗಳಲ್ಲಿ ಆಸಕ್ತಿ ಕಂಡುಬರುತ್ತಿಲ್ಲವೆನ್ನಲಾಗಿದೆ.

ಪ್ರಸ್ತುತ ಬೆಲೆ ಕಡಿಮೆ ಇದೆ

ಹಲವೆಡೆ ಏಲಕ್ಕಿ ಫಸಲು ಇದ್ದರೂ ಬೆಳೆಗಾರರಿಗೆ ನಿರೀಕ್ಷಿತ ದರ ಸಿಗುತ್ತಿಲ್ಲ. ಒಂದೆರಡು ವರ್ಷದ ಹಿಂದೆ ಅಂದಾಜು ರೂ. ೪ ಸಾವಿರದಷ್ಟಿದ್ದ ಬೆಲೆ ಇದೀಗ ಇಲ್ಲ. ಪ್ರಸ್ತುತ ಪ್ರತಿ ಕೆಜಿಗೆ ರೂ.೮೦೦ರಿಂದ ರೂ. ೧ ಸಾವಿರದಷ್ಟು (ಗುಣಮಟ್ಟಕ್ಕೆ ತಕ್ಕಂತೆ) ಬೆಲೆ ಲಭ್ಯವಾಗುತ್ತಿದೆ. ಕನಿಷ್ಟ ರೂ. ೧೫೦೦ರಿಂದ ರೂ. ೨ ಸಾವಿರದಷ್ಟಾದರೂ ಬೆಲೆ ಸಿಗಬೇಕೆಂಬುದು ರೈತರ ಅಭಿಪ್ರಾಯವಾಗಿದ್ದು, ಮುಂದಿನ ವರ್ಷಗಳಲ್ಲಿ ಸುಧಾರಣೆ ಕಾಣುವ ನಿರೀಕ್ಷೆ ಹೊಂದಿದ್ದಾರೆ.

ಹವಾಮಾನದ ವೈಪರೀತ್ಯ, ಭೂಕುಸಿತದ ಕಾರಣಗಳಿಂದಲೂ ಬೆಳೆಗಾರರು ಕೆಲ ವರ್ಷದಿಂದ ಇದ್ದ ಕೃಷಿಯನ್ನು ಕಳೆದುಕೊಂಡಿದ್ದಾರೆ. ಇದೀಗ ಕೇರಳ ರಾಜ್ಯದಲ್ಲೂ ಬೆಳೆ ಸುಧಾರಿಸುತ್ತಿರುವುದರಿಂದ ಬೆಲೆ ಹೆಚ್ಚು ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಭವಿಷ್ಯದಲ್ಲಿ ಸಂಬಾರ ರಾಣಿಗೆ ಬೇಡಿಕೆ ಹಾಗೂ ಬೆಲೆ ಬರುವ ಆಶಾಭಾವನೆ ಬೆಳೆಗಾರರದ್ದಾಗಿದೆ.

೧೨ ಸಾವಿರ ಹೆಕ್ಟೇರ್

ಪ್ರಸ್ತುತದ ಅಂಕಿ - ಅಂಶಗಳ ಪ್ರಕಾರ ಕೊಡಗಿನಲ್ಲಿ ೧೨,೦೪೭ ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಬೆಳೆಯಿದೆ. ಈ ಪೈಕಿ ಸುಮಾರು ೬ ಸಾವಿರ ಹೆಕ್ಟೇರ್‌ನಲ್ಲಿ ಫಸಲು ಬರುತ್ತಿದೆ. ಅಂದಾಜು ೩೭೫೯ ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದ್ದರೆ, ೨೧೨೦ ಹೆಕ್ಟೇರ್‌ನಲ್ಲಿ ವಿವಿಧ ಕಾರಣಗಳಿಂದ ಫಸಲು ಸಿಗುತ್ತಿಲ್ಲ ಎಂಬ ಅಂದಾಜು ಮಾಡಲಾಗಿದೆ. ಕಳೆದ ಸಾಲಿನಲ್ಲಿ ೧೭೧.೧೩೦ ಮೆಟ್ರಿಕ್ ಟನ್‌ನಷ್ಟು ಏಲಕ್ಕಿ ಉತ್ಪಾದಿಸಲ್ಪಟ್ಟಿದೆ.

(ಮೊದಲ ಪುಟದಿಂದ)

ಗಿಡಕ್ಕೆ ಬೇಡಿಕೆ

ಕಳೆದ ವರ್ಷದಿಂದ ಏಲಕ್ಕಿ ಗಿಡಕ್ಕೆ ರೈತರಿಂದ ಬೇಡಿಕೆ ಹೆಚ್ಚು ಕಂಡುಬರುತ್ತಿದೆ. ಹಾಳಾಗಿದ್ದ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ ಅಂತರ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ ಎಂದು ತಾಕೇರಿಯ ಬೆಳೆಗಾರರಾದ ಎನ್.ಟಿ. ಸುಬ್ಬಯ್ಯ ಅವರು ‘ಶಕ್ತಿ’ಗೆ ತಿಳಿಸಿದರು. ಕಳೆದ ವರ್ಷ ತಾವೇ ೭ ಸಾವಿರ ಗಿಡಗಳನ್ನು ಮಾರಾಟ ಮಾಡಿದ್ದು, ಈ ಬಾರಿಯೂ ೩ ಸಾವಿರ ಗಿಡ ವಿತರಿಸಲಾಗಿದೆ. ಇನ್ನೂ ಗಿಡಕ್ಕೆ ಬೇಡಿಕೆ ಇರುವುದಾಗಿ ಅವರು ಮಾಹಿತಿಯಿತ್ತರು.