ಮಡಿಕೇರಿ, ಆ. ೨೬ : ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಬರೆದ ಕಾದಂಬರಿ ಆಧಾರಿತ ಕೊಡವ ಚಲನಚಿತ್ರ ‘ನಾಡ ಪೆದ ಆಶಾ’ ಸೆ. ೬ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. ೬ರಂದು ಬೆಳಿಗ್ಗೆ ೧೦ ಗಂಟೆಗೆ ಮೂರ್ನಾಡು ಕೊಡವ ಸಮಾಜದಲ್ಲಿ ನಡೆಯಲಿರುವ ಚಲನಚಿತ್ರ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಮೂರ್ನಾಡು ಗ್ರಾ.ಪಂ. ಸದಸ್ಯ ಮೂಡೇರ ಅಶೋಕ್ ಅಯ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್, ಮೂರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಮುಂಡAಡ ವಿಜು ತಿಮ್ಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
‘ನಾಡ ಪೆದ ಆಶಾ’ ಕಾದಂಬರಿ ಬರಹಗಾರ ನಾಗೇಶ್ ಕಾಲೂರು ಅವರು ಮಾತನಾಡಿ ಕೊಡಗು ಮತ್ತು ಕೊಡವ ಜನಾಂಗದ ಸಂಸ್ಕೃತಿಯ ಜೊತೆಗೆ ಯೋಧನ ಕುಟುಂಬ ಎದುರಿಸುವ ಕಷ್ಟಗಳನ್ನು ಚಲನಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದರು. ಚಿತ್ರದ ನಿರ್ಮಾಪಕರಾದ ಈರಮಂಡ ಹರಿಣಿ ವಿಜಯ್, ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಇವರುಗಳು ಮಾತನಾಡಿ, ಚಿತ್ರದಲ್ಲಿ ಹೆಣ್ಣಿನ ಮಹತ್ವದ ಬಗ್ಗೆ ವಿವರಿಸಲಾಗಿದ್ದು, ಉತ್ತಮವಾಗಿ ಚಿತ್ರ ಮೂಡಿ ಬಂದಿದೆ ಎಂದರು.
ಚಿತ್ರದ ನಾಯಕನಟ ಬೊಳ್ಳಜ್ಜಿರ ಅಯ್ಯಪ್ಪ ಮಾತನಾಡಿ, ‘ನಾಡ ಪೆದ ಆಶಾ’ ಚಿತ್ರವು ಸೆ.೬ ಮತ್ತು ೭ರಂದು ಮೂರ್ನಾಡು ಕೊಡವ ಸಮಾಜದಲ್ಲಿ, ೯, ೧೦, ೧೧ರಂದು ನಾಪೋಕ್ಲು ಕೊಡವ ಸಮಾಜದಲ್ಲಿ, ೧೪, ೧೫, ೧೬ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಪ್ರದರ್ಶನಗೊಳ್ಳಲಿದೆ. ಬೆಳಿಗ್ಗೆ ೧೦.೪೫, ಮಧ್ಯಾಹ್ನ ೧ ಗಂಟೆ ಬಳಿಕ ೩.೩೦ ಹಾಗೂ ಸಂಜೆ ೬ ಗಂಟೆಗೆ ಪ್ರದರ್ಶನ ಪ್ರಾರಂಭವಾಗಲಿದೆ ಎಂದರಲ್ಲದೆ ಚಿತ್ರ ಬಿಡುಗಡೆ ಸಮಾರಂಭದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಚಿತ್ರದ ನಾಯಕಿ ನೆಲ್ಲಚಂಡ ರಿಷಿ ಪೂವಮ್ಮ ಉಪಸ್ಥಿತರಿದ್ದರು.