ಮಡಿಕೇರಿ, ಆ. ೨೬: ಪ್ರಧಾನಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನ ಅವಂದೂರು ಗ್ರಾಮದಲ್ಲಿ ಸುಮಾರು ರೂ. ೧.೨೩ ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆ ಕಾಮ ಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಸರ್ಕಾರ ಪ್ರತೀ ಗ್ರಾಮಕ್ಕೂ ಶಾಶ್ವತ ಕುಡಿಯುವ ನೀರು ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಆ ದಿಸೆಯಲ್ಲಿ ಈ ಅವಕಾಶವನ್ನು ಪ್ರತಿಯೊಂದು ಗ್ರಾಮದವರು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಡಗು ಜಿಲ್ಲೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ೩೦೦ ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಒದಗಿಸಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ. ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಸರ್ಕಾರ ಒದಗಿಸಲಿದೆ. ಆ ನಿಟ್ಟಿನಲ್ಲಿ ಸ್ಥಳೀಯರು ಸಹ ಸಹಕರಿಸಬೇಕು ಎಂದರು.
ಸರ್ಕಾರ ಕೊಡಗು ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತಿದೆ. ಅದನ್ನು ಬಳಸಿಕೊಳ್ಳಬೇಕು. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರುವಂತಾಗಬೇಕು ಎಂದು ಕೆ.ಜಿ. ಬೋಪಯ್ಯ ಅವರು ಸಾರ್ವಜನಿಕರಲ್ಲಿ ಕೋರಿದರು.
ಮದೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಮೋಹಿನಿ, ತೇಜಕುಮಾರ್, ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ತಾ.ಪಂ. ಮಾಜಿ ಸದಸ್ಯರಾದ ಕೊಡಪಾಲು ಗಣಪತಿ, ತುಂತಜೆ ಕುಮುದಾ, ಪ್ರಮುಖರಾದ ಬೆಳ್ಯನ ರವಿ, ಚೆರಿಯಮನೆ ಆನಂದ, ಜಿ.ಪಂ. ಕಾರ್ಯಪಾಲಕ ಇಂಜಿನಿಯರ್ ಶ್ರೀಕಂಠಯ್ಯ, ಎಇಇ ಅಂಬೇಡ್ಕರ್, ಕಿರಿಯ ಇಂಜಿನಿಯರ್ ಕೃತಿಕ, ಪಿಡಿಒ ನಂಜುAಡ ಸ್ವಾಮಿ, ಗ್ರಾಮಸ್ಥರು ಇದ್ದರು.