ಮಡಿಕೇರಿ, ಆ. ೨೬: ನಗರದ ಕಾಲೇಜು ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿನ ೧೦ ಮಳಿಗೆಗಳಿಗೆ ನಗರಸಭೆಯ ಪರಿಸರ ವಿಭಾಗದ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ೧೫೦ ಕೆ.ಜಿ.ಯಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿದರು. ಪೌರಾಯುಕ್ತ ಎಸ್.ವಿ. ರಾಮದಾಸ್ ಅವರ ಮಾರ್ಗದರ್ಶನದಲ್ಲಿ ನಗರಸಭೆ ಪರಿಸರ ವಿಭಾಗದ ಎಇಇ ಸೌಮ್ಯ, ಆರೋಗ್ಯ ನಿರೀಕ್ಷಕಿ ಹರಿಣಿ, ಮಂಜುನಾಥ್, ಪರಮೇಶ್ವರಪ್ಪ ಅವರು ಗುರುವಾರ ನಗರಸಭೆ ವ್ಯಾಪ್ತಿಯ ವಿವಿಧೆಡೆ ದಾಳಿ ಮಾಡಿ ಕಸ ಮತ್ತು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.