ವೀರಾಜಪೇಟೆ, ಆ. ೨೬: ಶ್ರೀ ನಾರಾಯಣ ಗುರು ಪರಿಪಾಲನಾ ಯೋಗಂನ ವೀರಾಜಪೇಟೆ ಶಾಖೆಯು ಬ್ರಹ್ಮಶ್ರೀ ನಾರಾಯಣ ಗುರು ೧೬೭ ನೇ ಜನ್ಮ ದಿನಾಚರಣೆಯನ್ನು ನಗರದ ಗೌರಿಕೆರೆ ರಸ್ತೆಯ ಕೇಂದ್ರ ಕಚೇರಿಯಲ್ಲಿ ಸರಳ ರೀತಿಯಲ್ಲಿ ಆಚರಿಸಿತು. ಎಸ್.ಎನ್.ಡಿ.ಪಿ. ಶಾಖೆಯ ಅಧ್ಯಕ್ಷ ಟಿ.ಎ. ನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು. ಇಲಾಖೆಯ ಉಪಾಧ್ಯಕ್ಷ ಟಿ.ಆರ್ ಗಣೇಶ್ ಅವರು ಒಂದೇ ಮತ, ಶ್ರೀ ನಾರಾಯಣ ಗುರು ಅವರು ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಅಪಘಾತಕ್ಕೀಡಾಗಿದ್ದ ಎಸ್.ಎನ್.ಡಿ.ಪಿ ವೀರಾಜಪೇಟೆ ಸದಸ್ಯರೊಬ್ಬರಿಗೆ ಇದೇ ವೇಳೆ ಧನ ಸಹಾಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಎನ್.ಡಿ.ಪಿ ಜಿಲ್ಲಾ ಸಮಿತಿಯ ಸದಸ್ಯ ದಾಮೋದರ್ ಪೆಗ್ಗರಿಕಾಡು, ಕಾರ್ಯದರ್ಶಿ ಎಸ್. ಪದ್ಮನಾಭ, ಖಜಾಂಚಿ ಪ್ರಭಾಕರ್, ನಿರ್ದೇಶಕರಾದ ಸಿ.ಆರ್. ಬಾಬು, ಕೆ.ಕೆ. ಅನಿಲ್ ಕುಮಾರ್, ಉಪೇಂದ್ರ, ಜನಾರ್ಧನ್, ಸಂತೋಷ್ ಹಾಜರಿದ್ದರು.