ಮೈಸೂರು, ಆ. ೨೬: ದಶಕ ಗಳಿಂದಲೂ ಪುಟ್ಟ ಜಿಲ್ಲೆ ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ. ಇದೀಗ ಮೈಸೂರು-ಕುಶಾಲನಗರ ನಡುವಿನ ೮೮ ಕಿಲೋಮೀಟರ್ ಉದ್ದದ ರೈಲ್ವೇ ಮಾರ್ಗದ ಅಂತಿಮ ಮಾರ್ಗ ಸಮೀಕ್ಷೆ (ಈiಟಿಚಿಟ ಟoಛಿಚಿಣioಟಿ suಡಿveಥಿ)ಗೆ ಬೆಂಗಳೂರಿನ ಕಂಪೆನಿ ಯೊಂದಕ್ಕೆ ಟೆಂಡರ್ ನೀಡಿರುವುದಾಗಿ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೇ ಸೌಕರ್ಯ ವಂಚಿತ ರಾಜ್ಯದ ಏಕೈಕ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಈ ಜಿಲ್ಲೆಯ ರೈಲ್ವೇ ಮಾರ್ಗದ ಬೇಡಿಕೆಗೆ ದಶಕಗಳ ಇತಿಹಾಸವೇ ಇದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಾಗಲಿ ಅಥವಾ ಈಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಾಗಲಿ ಕೊಡಗಿನ ಜನತೆಯ ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಗಂಭೀರ ಪ್ರಯತ್ನವನ್ನೇ ಮಾಡಿಲ್ಲ. ಆಗೊಮ್ಮೆ ಈಗೊಮ್ಮೆ ಇದರ ಬಗ್ಗೆ ರಾಜಕಾರಣಿಗಳು ಮಾತಾಡಿದರೂ ನಂತರ ಮರೆತೇ ಬಿಡುತ್ತಾರೆ.
ಅಂದು ೨೦೦೯ ರಲ್ಲಿ ಕೇಂದ್ರ ರೈಲ್ವೇ ಸಹಾಯಕ ಸಚಿವರಾಗಿದ್ದ ವಿ. ಮುನಿಯಪ್ಪ ಅವರು ಮೈಸೂರಿನಿಂದ ಕುಶಾಲನಗರದ ವರೆಗಿನ ೮೮ ಕಿಲೋಮೀಟರ್ ಉದ್ದದ ರೈಲ್ವೇ ಹಳಿಯನ್ನು ನಿರ್ಮಿಸಲು ಸರ್ವೆ ಕಾರ್ಯಕ್ಕೂ ಆದೇಶಿಸಿದ್ದರು. ಇದು ಅಂದಿನ ಯುಪಿಎ ಸರ್ಕಾರದ ಬಜೆಟ್‌ನಲ್ಲೂ ಈ ವಿಷಯವನ್ನು ಒಳಪಡಿಸಿದ್ದು ರಾಜ್ಯದ ಪತ್ರಿಕೆಗಳ ವರದಿಯಲ್ಲೂ ಕರ್ನಾಟಕಕ್ಕೆ ಸಿಕ್ಕಿದ್ದೇನು ಎಂದು ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದವು. ಸ್ವತಃ ಮುನಿಯಪ್ಪ ಅವರೆ ಕೊಡಗಿಗೆ ಭೇಟಿ ನೀಡಿದ್ದಾಗ ಈ ಬಗ್ಗೆ ಭರವಸೆಯನ್ನೂ ನೀಡಿದ್ದರು. ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರೂ ಕೂಡ ಕೇಂದ್ರದ ನಿರ್ಧಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಉದ್ದೇಶಿತ ರೈಲ್ವೇ ಮಾರ್ಗ ಯೋಜನೆಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ತಲಾ ಶೇ. ೫೦ ರಷ್ಟು ವೆಚ್ಚ ಭರಿಸಬೇಕಿದ್ದು ರಾಜ್ಯ ಸರ್ಕಾರ ತನ್ನ ಖರ್ಚಿನಲ್ಲೇ ಭೂಮಿಯನ್ನೂ ಒದಗಿಸಬೇಕಿತ್ತು. ಆದರೆ ಈ ಯೋಜನೆ ಕಾಗದದಲ್ಲೇ ಉಳಿಯಿತು.
ನಂತರ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ದೃಶ್ಯ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಿಯೇ ಸಿದ್ಧ ಎಂದು ಹೇಳಿದರಲ್ಲದೆ, ಇಲ್ಲದಿದ್ದರೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಮತ್ತು ರೈಲು ಬಾರದಿದ್ದರೆ ಮುಂದಿನ ಚುನಾವಣೆಗೂ ಸ್ಪರ್ದಿಸುವುದಿಲ್ಲ ಎಂದು ಘೋಷಿಸಿದ್ದರು. ಆದರೆ ಅವರು ಪುನಃ ರೈಲ್ವೇ ಸಂಪರ್ಕ ಕಲ್ಲಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಭರವಸೆ ನೀಡಿ ಎರಡನೇ ಬಾರಿಯೂ ಸಂಸದರಾಗಿ ಆಯ್ಕೆ ಆದರು.
ಆಮೆ ವೇಗದಲ್ಲೇ ಸಾಗುತ್ತಿರುವ ಈ ಯೋಜನೆಯ ಮೊತ್ತ ಇದೀಗ ೧೬೫೭ ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ. ಈ ಹಿಂದೆಯೇ ಮಾರ್ಗ ಸಮೀಕ್ಷೆ ಕೈಗೊಂಡಿದ್ದ ರೈಲ್ವೇ ಇಲಾಖೆ ಈ ಯೋಜನೆ ಆರ್ಥಿಕವಾಗಿ ಕಾರ್ಯ ಸಾಧುವಲ್ಲ ಎಂಬ ಕಾರಣ ನೀಡಿ ಯೋಜನೆಯನ್ನೇ ಕೈ ಬಿಡಲು ಯೋಜಿಸಿತ್ತು. ಜನತೆಯ ಒತ್ತಾಯ ದಿಂದ ಮತ್ತೆ ಈ ಯೋಜನೆ ತೆವಳುತ್ತಾ ಸಾಗುತ್ತಿದೆ. ಯೋಜನೆಯ ಫೈನಲ್ ಲೊಕೇಷನ್ ಸರ್ವೆಗೆ ೬ ತಿಂಗಳ ಹಿಂದೆಯೇ ಟೆಂಡರ್ ಕರೆಯಲಾಗಿತ್ತು. ಐವರು ಬಿಡ್‌ದಾರರೂ ಟೆಂಡರ್ ಸಲ್ಲಿಸಿದ್ದರು. ಆದರೆ ಬಿಡ್‌ದಾರರು ನಿಗದಿತ ಮಾನದಂಡ ಅರ್ಹತೆ ಹೊಂದಿಲ್ಲದ ಕಾರಣದಿಂದ ಬಿಡ್‌ಗಳನ್ನು ತಿರಸ್ಕರಿಸಿ ಮೂರು ತಿಂಗಳ ಹಿಂದೆ ಮರು ಟೆಂಡರ್ ಕರೆಯಲಾಗಿತ್ತು. ಕಳೆದ ಆಗಸ್ಟ್ ೨೦ ರಂದು ಬಿಡ್‌ಗಳನ್ನು ಪರಿಶೀಲಿಸಿ ಬೆಂಗಳೂರು ಮೂಲದ ಕಂಪೆನಿಯೊAದಕ್ಕೆ ೧.೨೬ ಕೋಟಿ ರೂಪಾಯಿಗಳಿಗೆ ಟೆಂಡರ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಂಪೆನಿ ಮುಂದಿನ ವಾರದಿಂದಲೇ ಲೊಕೇಷನ್ ಸರ್ವೆ ಕಾರ್ಯ ಆರಂಭಗೊಳಿಸಲಿದ್ದು ಮುಂದಿನ ೬ ತಿಂಗಳಿನೊಳಗಾಗಿ ಅಂದರೆ ಫೆಬ್ರ‍್ರವರಿ ೨೦೨೨ ರ ಅಂತ್ಯದೊಳಗಾಗಿ ತನ್ನ ವರದಿಯನ್ನು ಸಲ್ಲಿಸಲಿದೆ.
ಈ ಫೈನಲ್ ಲೊಕೇಷನ್ ಸರ್ವೆಯ ನಂತರವಷ್ಟೆ ಎಲ್ಲೆಲ್ಲಿ ಮೇಲ್ಸೇತುವೆ, ಸೇತುವೆ, ಕ್ರಾಸಿಂಗ್‌ಗಳು ಬರಲಿವೆ ಎಂದು ತಿಳಿಯಲಿದೆ. ಇದನ್ನು ದೆಹಲಿಯಲ್ಲಿರುವ ರೈಲ್ವೇ ಮಂಡಳಿಗೆ ಸಲ್ಲಿಸಲಾಗುತ್ತದೆ. ನಂತರ ಈ ಯೋಜನೆಯ ಒಟ್ಟು ವೆಚ್ಚವನ್ನು ನಿಗದಿಪಡಿಸಲಾಗುತ್ತದೆ. ಇದಾದ ನಂತರ ರಾಜ್ಯ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಬಜೆಟ್‌ನಲ್ಲಿ ಹಣ ಮೀಸಲಿರಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಸ್ಥಳಿಯ ಸಂಸದ ಪ್ರತಾಪ್ ಸಿಂಹ ಅವರು ಈಗ ೮೫೦೦ ಕೋಟಿ ರೂಪಾಯಿ ವೆಚ್ಚದ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಅನುಷ್ಠಾನಕ್ಕೆ ತೋರುತ್ತಿರುವ ಆಸಕ್ತಿಯನ್ನೇ ಈ ಯೋಜನೆಗೂ ತೋರಿದರೆ ೨೦೨೫ ರೊಳಗೆ ಈ ಮಾರ್ಗದಲ್ಲಿ ರೈಲು ಓಡಾಡುವುದು ಕಷ್ಟವೇನಲ್ಲ.
ಈ ಯೋಜನೆ ಜಾರಿಯಾದರೆ ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗಲಿದ್ದು ಬೆಂಗಳೂರು -ಕುಶಾಲನಗರದ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆ ಆಗಲಿದೆ. ಈ ಮಾರ್ಗದಲ್ಲಿ ನಿತ್ಯವೂ ೨೫೦ಕ್ಕೂ ಅಧಿಕ ಸಾರಿಗೆ ಬಸ್‌ಗಳು ಸಂಚರಿಸುತಿದ್ದು ಆರಾಮದಾಯಕ ಮತ್ತು ಮಿತವ್ಯಯದ ಪ್ರಯಾಣಕ್ಕಾಗಿ ಜನರು ರೈಲ್ವೇ ಕಡೆ ಮುಖ ಮಾಡಲಿದ್ದಾರೆ. ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಕುಶಾಲನಗರದಿಂದಲೇ ರೈಲು ಬುಕ್ ಮಾಡಬಹುದಾಗಿದೆ. ಕೊಡಗಿನಲ್ಲಿ ಬೆಳೆಯುವ ಕಾಫಿಯನ್ನು ಬಂದರಿಗೆ ಸಾಗಿಸಲೂ ಇದು ಬಹು ಉಪಯುಕ್ತ ವಾಗಿದೆ. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರಲು ರಾಜ ಕಾರಣಿಗಳ ಇಚ್ಚಾಶಕ್ತಿ ಮುಖ್ಯವಾಗಿದೆ.
- ಕೋವರ್ ಕೊಲ್ಲಿ ಇಂದ್ರೇಶ್