ಮಡಿಕೇರಿ, ಆ. ೨೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ವತಿಯಿಂದ ಗೂಗಲ್ ಮೀಟ್ ಮೂಲಕ ೧೬ ದಿನಗಳ ಕಾಲ ನಡೆಯುವ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಬದುಕು ಮತ್ತು ಬರಹ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಶಕ್ತಿ ದಿನಪತ್ರಿಕೆಯ ಸಂಪಾದಕ ಬಿ.ಜಿ. ಚಿದ್ವಿಲಾಸ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಹಿರಿಯ ಸಾಹಿತ್ಯಗಳನ್ನು ಮತ್ತೆ ಈ ಉಪನ್ಯಾಸದ ಮೂಲಕ ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಣಿ ಉಪನ್ಯಾಸ ಸಾಹಿತ್ಯ ಕೃಷಿಯನ್ನು ಬೆಳೆಸಲು ಸಹಕಾರಿಯಾಗಲಿದೆ. ಈ ಹಿಂದೆ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಕೆಲವರು ದಿವಂಗತರಾಗಿದ್ದು ಅವರುಗಳನ್ನು ನೆನಪಿಸಿಕೊಳ್ಳುವಂತೆ, ಅವರ ಬದುಕು ಬರಹಗಳ ಕಡೆ ಮತ್ತೊಮ್ಮೆ ಗಮನಹರಿಸಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದ ಬಗ್ಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೇಮ ರಾಘವಯ್ಯ ಅವರು ಪ್ರಾರ್ಥಿಸಿ, ಅಶ್ವತ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಹಪ್ರಾಧ್ಯಾಪಕ ಡಾ. ದಯಾನಂದ ಕೆ.ಸಿ. ನಿರ್ವಹಿಸಿದರು. ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ, ಕನ್ನಡ ಸಾಹಿತ್ಯ ಪರಿಷತ್ತಿನ, ಜಿಲ್ಲಾ ಸಮಿತಿ, ತಾಲೂಕು ಸಮಿತಿ ಮತ್ತು ಹೋಬಳಿ ಸಮಿತಿ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಹೊರ ಜಿಲ್ಲೆಯ ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು.