ಮಡಿಕೇರಿ, ಆ. ೨೬ : ಅಭಯಾರಣ್ಯವಾಗಿರುವ ಮಾಂದಲಪಟ್ಟಿಯಲ್ಲಿ ಜಾಲಿ ರೈಡ್ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಹೆಲಿಕಾಪ್ಟರ್ ಹಾರಾಟವಾಗುತ್ತಿದ್ದು, ಇದರಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ. ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿರುವ ಸಂಘಟನೆಯ ಪ್ರಮುಖರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನಗರದ ಅರಣ್ಯ ಭವನಕ್ಕೆ ತೆರಳಿದ ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ನೇತೃತ್ವದ ನಿಯೋಗ ಅಧಿಕಾರಿಗಳಿಗೆ ದೂರು ನೀಡಿ ಹೆಲಿಕಾಪ್ಟರ್ ಹಾರಾಟದಿಂದ ಆಗಬಹುದಾದ ಅನಾಹುತಗಳ ಬಗ್ಗೆ ವಿವರಿಸಿದರು.

ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಮಾಂದಪಟ್ಟಿಯಲ್ಲಿ ಪೂರ್ವಾನುಮತಿ ಇಲ್ಲದೆ ಹೆಲಿಕಾಪ್ಟರ್ ಹಾರಾಡುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.

ತಕ್ಷಣ ಹೆಲಿಕಾಪ್ಟರ್ ಹಾರಾಟವನ್ನು ಸ್ಥಗಿತಗೊಳಿಸಬೇಕು ಮತ್ತು ನಿಯಮ ಉಲ್ಲಂಘಿಸಿದ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕೊರವೇ ನಿರ್ದೇಶಕ ಪಾಪುರವಿ, ಮಡಿಕೇರಿ ನಗರ ಘಟಕದ ಸಂಚಾಲಕರುಗಳಾದ ಆರ್.ವಿನೋದ್, ರಾಜುಕೀರ್ತಿ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.