ಮಡಿಕೇರಿ, ಆ. ೨೭: ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸಲು ಮುಕ್ತ ಅವಕಾಶ ನೀಡಬೇಕೆಂದು ವಿಶ್ವ ಹಿಂದೂ ಪರಿಷದ್, ಬಜರಂಗದಳದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಹಿಂದೂಗಳ ಪ್ರಮುಖ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಗಣೇಶೋತ್ಸವವನ್ನು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಾರ್ವಜನಿಕ ಪೆಂಡಾಲುಗಳಲ್ಲಿ ಗಣೇಶೋತ್ಸವ ನಡೆಸಲು ಕಳೆದ ವರ್ಷ ಅವಕಾಶ ನೀಡಲಾಗಿತ್ತು. ಎಚ್ಚರಿಕೆಯ ಗಣೇಶೋತ್ಸವವನ್ನು ಆಚರಿಸಲಾಗಿತ್ತು. ಈ ವರ್ಷವೂ ಸಹ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ವಿಘ್ನ ವಿನಾಶಕನಾದ ಶ್ರೀ ಗಣೇಶನ ಪರಂಪರಾಗತ ಉತ್ಸವವನ್ನು (ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು) ಸಾರ್ವಜನಿಕವಾಗಿ ಪೆಂಡಾಲುಗಳಲ್ಲಿ ಆಚರಿಸಲು ಮುಕ್ತ ಅವಕಾಶ ನೀಡಬೇಕೆಂದು ಈ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಬಜರಂಗದಳ ಪ್ರಮುಖರಾದ ಚೇತನ್ ಕೆ.ಹೆಚ್., ವಿನಯ್‌ಕುಮಾರ್, ಮನು ರೈ, ದುರ್ಗೇಶ್, ಚರಣ್ ಕುಮಾರ್ ಇತರರಿದ್ದರು.