ಶನಿವಾರಸAತೆ, ಆ. ೨೭: ಶನಿವಾರಸಂತೆಯ ಸಂತೆ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಆದರೆ ಇಂದು ದಿನಮುಂಚಿತವಾಗಿ ಶುಕ್ರವಾರ ಸಂತೆ ನಡೆಯಿತು.

ಕೊರೊನಾ ಕಾರಣದಿಂದ ಶನಿವಾರ- ಭಾನುವಾರ ವೀಕೆಂಡ್ ಕರ್ಫ್ಯೂ ಇರುವುದರಿಂದ ಶನಿವಾರದ ಸಂತೆಯನ್ನು ಶುಕ್ರವಾರ ನಡೆಸಲಾಗುವುದು ಎಂದು ಪಟ್ಟಣದಲ್ಲಿ ಗುರುವಾರ ಮೈಕ್ ಮೂಲಕ ಪ್ರಚಾರ ಮಾಡಲಾಗಿತ್ತು. ಸಂತೆ ಸುಂಕದವರು ಸಂತೆಗೆ ಬರುವ ಹೊರ ಜಿಲ್ಲೆಯ ವ್ಯಾಪಾರಸ್ಥರಿಗೆ ಶುಕ್ರವಾರ ಸಂತೆ ನಡೆಯುತ್ತದೆ ಎಂದು ತಿಳಿಸಿದ್ದಾರೆ. ಅದರಂತೆ ಇಂದು ಬೆಳಿಗ್ಗೆ ಹೊರ ಜಿಲ್ಲೆಯ ಹಾಗೂ ಸ್ಥಳೀಯ ವ್ಯಾಪಾರಸ್ಥರು ಸಂತೆ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಹಾಕಿಕೊಂಡಿದ್ದರು. ಆದರೆ, ಶನಿವಾರಸಂತೆಯ ಸುತ್ತಮುತ್ತಲಿನ ಹಳ್ಳಿಯ ತೋಟ ಕಾರ್ಮಿಕರಿಗೆ ಹಾಗೂ ಗ್ರಾಮಸ್ಥರಿಗೆ ಇಂದು ನಡೆಯುವ ಸಂತೆಯ ವಿಚಾರ ತಿಳಿದಿಲ್ಲ. ಅದಲ್ಲದೆ, ತೋಟ ಕಾರ್ಮಿಕರಿಗೆ ಇಂದು ಸಂಜೆ ತೋಟ ಮಾಲೀಕರು ಕೂಲಿ ಬಟಾವಡೆ ಮಾಡುತ್ತಾರೆ, ಅವರುಗಳು ಪ್ರತಿ ಶನಿವಾರ ಸಂತೆಗೆ ಬಂದು ವಾರಕ್ಕೆ ಬೇಕಾದ ಸಾಮಗ್ರಿಗಳನ್ನು ಸಂತೆಯಿAದ ತೆಗೆದುಕೊಂಡು ಮನೆಗಳಿಗೆ ಹೋಗುತ್ತಾರೆ.

ಆದರೆ, ಇಂದು ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರೇ ವಿರಳ. ಸಂತೆ ಹಾಗೂ ಪಟ್ಟಣದ ವ್ಯಾಪಾರಸ್ಥರು, ಕೆಲವು ಗ್ರಾಹಕರು ‘ಗ್ರಾಮ ಪಂಚಾಯಿತಿ ತೀರ್ಮಾನ ಸರಿಯಲ್ಲ ಗ್ರಾಹಕರೇ ಬಾರದೆ ಇರುವುದರಿಂದ ಎಲ್ಲರಿಗೂ ನಷ್ಟ. ಶನಿವಾರಸಂತೆ ಹೆಸರನ್ನು ಶುಕ್ರವಾರ ಸಂತೆ ಎಂಬುದಾಗಿ ಬದಲಾಯಿಸಲಿ’ ಎಂದು ವ್ಯಂಗ್ಯವಾಡಿದರು. ‘ಶನಿವಾರ ಅರ್ಧ ದಿನ ಸಂತೆ ನಡೆಸಿದರೆ ವ್ಯಾಪಾರಸ್ಥರನ್ನು ಸಂತೆ ಮಾರುಕಟ್ಟೆಯಿಂದ ಖಾಲಿ ಮಾಡಿಸಲು ಹರಸಾಹಸ ಮಾಡಬೇಕು’ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್. ಸದಸ್ಯರಾದ ಸರ್ದಾರ್ ಅಹಮ್ಮದ್ ಅವರನ್ನು ಕೇಳಿದರೆ, ‘ಅಧ್ಯಕ್ಷರನ್ನು ಕೇಳಬೇಕು’ ಎಂದು ಉತ್ತರಿಸುತ್ತಾರೆ. ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರಿಗೆ ವಿಚಾರ ತಿಳಿಸಿದರೆ, ‘ಪಂಚಾಯಿತಿ ಆಡಳಿತಾಧಿಕಾರಿಗೆ ಬಿಟ್ಟಿದ್ದು’ ಎನ್ನುತ್ತಾರೆ. ದ್ವಂದ್ವ ನಿಲುವಿನಿಂದಾಗಿ ವ್ಯಾಪಾರಸ್ಥರು ಹೆಣಗಾಡಬೇಕಾಯಿತು.

-ನರೇಶ್‌ಚಂದ್ರ.