ಮಡಿಕೇರಿ, ಸೆ. ೨: ಗೌಡ ಜನಾಂಗದ ಸಂಸ್ಕೃತಿ, ಆಚಾರ-ವಿಚಾರಗಳು ಮುಂದಿನ ಪೀಳಿಗೆಗೆ ರವಾನೆಯಾಗಬೇಕಿದ್ದರೆ ಯುವ ಜನಾಂಗ ಅದರತ್ತ ಆಕರ್ಷಿತವಾಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿಯ ವತಿಯಿಂದ ನಡೆಯುವ ಶಿಬಿರಗಳಲ್ಲಿ ಯುವಕ-ಯುವತಿಯರು ಪಾಲ್ಗೊಂಡು ಸಂಸ್ಕೃತಿ, ಆಚಾರ-ವಿಚಾರಗಳನ್ನು ಕಲಿತುಕೊಳ್ಳಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜಗದ್ದೆ ಹೇಳಿದ್ದಾರೆ.

ಅವರು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾ.ಪಂ. ಸಭಾಂಗಣದಲ್ಲಿ ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸುವ ಸಲುವಾಗಿ ಗ್ರಾಮದಲ್ಲಿ ತಾ. ೨೩, ೨೪ ಹಾಗೂ ೨೫ ರಂದು ಆಯೋಜಿಸಲಾಗುವ ಮೂರು ದಿನಗಳ ಶಿಬಿರದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮೂರು ದಿನಗಳ ಶಿಬಿರದಲ್ಲಿ ಕನಿಷ್ಟ ಮೂವತ್ತು ಯುವಕ-ಯುವತಿಯರು ಪಾಲ್ಗೊಂಡು ಗೌಡ ಸಂಸ್ಕೃತಿಗಳ ಭಾಗವಾದ ಶೋಬಾನೆ, ಹುಟ್ಟು-ಸಾವಿನ ಸಂದರ್ಭಗಳಲ್ಲಿ ಆಚರಿಸಲಾಗುವ ಪದ್ಧತಿಗಳನ್ನು ಕಲಿತುಕೊಂಡು ಸಮಾರೋಪ ಸಮಾರಂಭದ ದಿನ ಪ್ರದರ್ಶನ ನೀಡುವಂತಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಗ್ರಾಮದ ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ಶಿಬಿರದ ಉದ್ದೇಶ ಹಾಗೂ ಕಾರ್ಯಕ್ರಮ ಆಯೋಜನೆಯ ಕುರಿತು ಮಾಹಿತಿ ನೀಡಿದರು.

ಮಂಡೆಕೋಲು ಗೌಡ ಸಮಿತಿಯ ಅಧ್ಯಕ್ಷ ಜನಾರ್ಧನ ಬರೆಮೇಲು ಸ್ವಾಗತಿಸಿದರು. ಶಿವಪ್ರಸಾದ್ ಉಗ್ರಾಣಿಮನೆ ವಂದಿಸಿದರು. ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಸದಾನಂದ ಮಾವಜಿ, ಗ್ರಾಮಸ್ಥರಾದ ಕೇಶವ ಗೌಡ ಬಾಳೆಕೋಡಿ, ಪಿತಾಂಬರ ಪಾತಿಕಲ್ಲು, ಹರಿಶ್ಚಂದ್ರ ಪಾತಿಕಲ್ಲು, ಲಿಂಗಪ್ಪ ಮಂಡೆಕೋಲು, ಶುಭಕರ ಬೊಳುಗಲ್ಲು ಹಾಗೂ ಮತ್ತಿತರರು ಇದ್ದರು.