ಕೂಡಿಗೆ, ಸೆ. ೨ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ಸಹ ರೇಷ್ಮೆ ಇಲಾಖೆಯ ಕಚೇರಿ ಇದೆ. ಜಿಲ್ಲೆಯಲ್ಲಿ ಅಧಿಕ ಮಳೆ ಸುರಿಯುವ ಕಾರಣ ಮಡಿಕೇರಿ ಹಾಗೂ ಸೇಮವಾರಪೇಟೆಯ ಕೆಲ ಪ್ರದೇಶಗಳಲ್ಲಿ ಮಾತ್ರ ರೇಷ್ಮೆ ಬೆಳೆಯನ್ನು ಬೆಳೆಯಲು ಸಾಧ್ಯ. ಆದರೆ ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಕೇವಲ ಇಬ್ಬರೇ ಸಿಬ್ಬಂದಿಗಳು ಮಾತ್ರ ಇರುವುದು ರೇಷ್ಮೆ ಬೆಳೆಯುವವರ ಸಂಖ್ಯೆ ಅತೀ ಕಡಿಮೆಯಾಗಿದ್ದು, ತರಬೇತಿ ಕೊರತಯಿಂದಾಗಿ ಬೆಳೆಗಾರರಲ್ಲಿ ಆಸಕ್ತಿಯೂ ಕುಗ್ಗಿದೆ.ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕು ವ್ಯಾಪ್ತಿಯ ಕೆಲ ರೈತರು ಆಯ್ದ ಕೆಲ ಭಾಗಗಳಲ್ಲಿ ೩೦ ವರ್ಷಗಳಿಂದಲೂ ಕಷ್ಟ -ನಷ್ಟಗಳ ನಡುವೆ ತಮ್ಮ ಜಮೀನುಗಳಲ್ಲಿ ಹಿಪ್ಪೆನೇರಳೆ ಗಿಡಗಳನ್ನು ನೆಟ್ಟು, ರೇಷ್ಮೆ ಮೊಟ್ಟೆಯನ್ನು ತಂದು ರೇಷ್ಮೆ ಬೆಳೆಯನ್ನು (ಗೂಡು) ಬೆಳೆದು ಮಾರಾಟ ಮಾಡುತ್ತಿದ್ದಾರೆ. ಆದರೆ, ರೈತರುಗಳಿಗೆ ಉತ್ತೇಜನ ಮತ್ತು ತರಬೇತಿ ನೀಡಿ ಸೂಕ್ತ ಮಾಹಿತಿಯನ್ನು ನೀಡಲು ಕಳೆದ ೨೦ ವರ್ಷಗಳಿಂದಲೂ ಜಿಲ್ಲೆಯ ರೇಷ್ಮೆ ಇಲಾಖೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸರಕಾರ ನೇಮಕ ಮಾಡದ ಕಾರಣ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯು ತೀರಾ ಕಡಿಮೆಯಾಗುತ್ತಿದ್ದು, ರೇಷ್ಮೆ ಬೆಳೆಯುವ ರೈತರು ಕೂಡ ಕಡಿಮೆಯಾಗಿದ್ದಾರೆ. ರೈತರು ತಮ್ಮ ಜಮೀನುಗಳಲ್ಲಿ ಹಿಪ್ಪೆನೇರಳೆ ಗಿಡಗಳನ್ನು ನೆಟ್ಟಿದ್ದನ್ನು ಕಿತ್ತು ಹಾಕಿ ಬೇರೆ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ.

ಸಿಬ್ಬAದಿಗಳಿಲ್ಲದೆ ಮೂಲೆಗುಂಪಾಗಿರುವ ರೇಷ್ಮೆ ಮೊಟ್ಟೆ ಉತ್ಪಾದನಾ ಕೇಂದ್ರ ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ರೇಷ್ಮೆ ಉಪ ನಿರ್ದೇಶಕ ಹುದ್ದೆ ಹಾಗೂ ಸಹಾಯಕ ಹುದ್ದೆಗಳಿಗೆ ಯಾರೂ ನೇಮಕಗೊಂಡಿಲ್ಲ. ಇರುವ ಒಬ್ಬ ಅಧಿಕಾರಿಗೆ ಜಿಲ್ಲೆಯ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದು, ಎಲ್ಲಾ ಜವಾಬ್ದಾರಿಗಳನ್ನು ಅವರಿಗೇ ನೀಡಲಾಗಿದೆ. ಈ ಅಧಿಕಾರಿ ಪ್ರಭಾರ ಹೊರತು ನೇಮಕಾತಿಯವರಲ್ಲ.

ಜಿಲ್ಲೆಯಲ್ಲಿ ೩೦ಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರು ಸೋಮವಾರಪೇಟೆ ತಾಲೂಕಿನಲ್ಲಿದ್ದಾರೆ. ಈ ವ್ಯಾಪ್ತಿಯಲ್ಲಿ ತಾಂತ್ರಿಕ ಕೇಂದ್ರ, ಮೂರು ರೇಷ್ಮೆ ಸೇವಾ ಕೇಂದ್ರಗಳು ಬರುತ್ತ್ತವೆ. ಸೋಮವಾರಪೇಟೆ ವಿಸ್ತರಣಾ ಕೇಂದ್ರ, ಕೊಡ್ಲಿಪೇಟೆ ವಿಸ್ತರಣಾ ಕೇಂದ್ರಗಳ ಮೂಲಕ ರೈತರುಗಳಿಗೆ ರೇಷ್ಮೆ ಬೆಳೆಯನ್ನು ಬೆಳೆಯಲು ತರಬೇತಿ ನೀಡುವುದು ಅಗತ್ಯ.ಕಳೆದ ೧೫ ವರ್ಷಗಳ ಹಿಂದೆ ೧೭ ಜನ ಸಿಬ್ಬಂದಿಗಳು ಈ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೂರು ವರ್ಷಗಳ ಹಿಂದೆÀ ೧೫ ಮಂದಿ ನಿವೃತ್ತಿ ಹೊಂದಿದ್ದು, ಪ್ರಸ್ತುತ ಇರುವುದು ಕೇವಲ ಇಬ್ಬರು ಮಾತ್ರ.

(ಮೊದಲ ಪುಟದಿಂದ) ಇದರಿಂದಾಗಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯಲು ಬೇಕಾಗುವ ತರಬೇತಿಯನ್ನು ನೀಡುವವರೇ ಇಲ್ಲ. ಇದರ ಜೊತೆಯಲ್ಲಿ ಹೊರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಕೊಡಗು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಮನೆಮನೆಗೆ ತೆರಳಿ ರೈತರಿಗೆ ಮಾಹಿತಿ

ಈಗಿನ ಪ್ರಭಾರ ಸಹಾಯಕ ನಿರ್ದೇಶಕರು, ಇರುವ ಇಬ್ಬರೇ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಕೆಲ ರೇಷ್ಮೆ ಬೆಳೆದ ರೈತರ ಮನೆಗಳಿಗೆ ಹೋಗಿ ತಮ್ಮಿಂದ ಆಗುವಷ್ಟು ಮಾಹಿತಿಯನ್ನು ರೈತರಿಗೆ ನೀಡುತ್ತಿದ್ದಾರೆ. ಕೂಡುಮಂಗಳೂರು, ಚಿಕ್ಕತ್ತೂರು, ಗುಡ್ಡೆಹೊಸೂರು, ಯಡವನಾಡು, ಶಿರಂಗಾಲ, ಅಳುವಾರ, ತೊರೆನೂರು, ಸೀಗೆಹೊಸೂರು, ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ. ಈ ಎಲ್ಲಾ ಪ್ರದೇಶಗಳಿಗೆ ತೆರಳಿ ಅವರುಗಳು ರೈತರಿಗೆ ಬೆಳೆ ನಿರ್ವಹಣೆ ಕುರಿತು ಮಾಹಿತಿ ನೀಡುತ್ತಿರುವುದು ವಿಶೇಷ.

ತರಬೇತಿ ಅತ್ಯಗತ್ಯ

ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆಯು ವಾಣಿಜ್ಯ ಬೆಳೆಗಳ ಮಾದರಿಯಾಗಿದ್ದು , ಒಂದು ಕೆಜಿ ರೇಷ್ಮೆ ಗೂಡಿಗೆ ಎರಡು ಸಾವಿರದಿಂದ ಮೂರು ಸಾವಿರದವರೆಗೂ ಬೆಲೆ ಇದೆ. ಇಂದಿನ ವಿದ್ಯಾವಂತ ಯುವ ರೈತರು ಮತ್ತು ಮಹಿಳಾ ರೈತರುಗಳು ರೇಷ್ಮೆ ಬೆಳೆಯತ್ತ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿ ತರಬೇತಿ ಪಡೆಯಲು ಇಚ್ಚಿಸಿದರೂ ತರಬೇತಿ ನೀಡುವ ಅಧಿಕಾರಿಗಳು ಇಲ್ಲದೆ ಅದಕ್ಕಾಗಿ ಮೀಸಲಾದ ಕಟ್ಟಡವು ಸಹ ಮೂಲೆ ಗುಂಪಾಗಿದೆ.

ವಿದ್ಯಾವAತ ನಿರುದ್ಯೋಗಿ ಯುವಕರು ರೇಷ್ಮೆ ಬೆಳೆಯನ್ನು ಬೆಳೆಯುವತ್ತ ಮುಂದಾಗಿದ್ದಾರೆ. ಅದರಿಂದ ಸರಕಾರ ಜಿಲ್ಲಾ ಪಂಚಾಯಿತಿ ಮೂಲಕವಾದರೂ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿ ತಾಲೂಕಿನ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಬೆಳೆಯುವ ಬಗ್ಗೆ ತರಬೇತಿ ನೀಡಲು ಮುಂದಾಗಬೇಕಾಗಿದೆ. ಅಲ್ಲದೆ ಮೂಲ ತಳಿಗೆ ಹೆಚ್ಚು ಒತ್ತು ಕೊಡುವ ಕೆಲಸವಾಗಬೇಕಾಗಿದೆ ಎನ್ನುತ್ತಾರೆ ಕೆಲ ರೇಷ್ಮೆ ಬೆಳೆಗಾರರು.

ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಈಗಿರುವ ೩ ಎಕರೆ ಪ್ರದೇಶದಲ್ಲಿ ಎರಡು ಮಂದಿ ಸಿಬ್ಬಂದಿ ಇದ್ದು ಅಭಿವೃದ್ಧಿಪಡಿಸಲು ಸಾಧ್ಯವೇ? ಸೋಮವಾರಪೇಟೆ ತಾಲೂಕಿನ ರೇಷ್ಮೆ ಬೆಳೆಗಾರರಿಗೆ ಉತ್ತೇಜನ ಎಲ್ಲಿ ಎಂಬುದು ಪ್ರಶ್ನೆಯಾಗಿದೆ. ಆದರೆ ಕ್ಷೇತ್ರದ ಒಳಗೆ ಇರುವ ೨೩ ವಸತಿ ಗೃಹಗಳು ಮಾತ್ರ ಬೇರೆಬೇರೆ ಇಲಾಖೆಯವರು ಉಪಯೋಗಿಸುತ್ತಿರುವುದರಿಂದ ಇಲಾಖೆಯ ವಸತಿ ಗೃಹಗಳು ಉಳಿಯುತ್ತಿವೆ. ಇವರು ರೇಷ್ಮೆ ಇಲಾಖೆಯ ಭಾಗವನ್ನು ಉಪಯೋಗಿಸಿಕೊಂಡು ರೇಷ್ಮೆ ಬೆಳೆಗೆ ಅನುಕೂಲವಾಗುವ ಹಿಪ್ಪೆನೇರಳೆ ಗಿಡಗಳನ್ನು ನೆಟ್ಟು ಬೆಳೆಸಿ ಹುಳುಗಳನ್ನು ಸಾಕಿದರೆ ಮತ್ರ ಇಲಾಖೆಯ ಹೆಸರು ಉಳಿಯುತ್ತದೆ. -ಕೆ.ಕೆ. ನಾಗರಾಜಶೆಟ್ಟಿ