ಸೋಮವಾರಪೇಟೆ, ಸೆ.೪: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು ಗ್ರಾಮದಿಂದ ಕಾಜೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದಲ್ಲಿ ನಿರ್ಮಿಸಲಾಗಿರುವ ಸೇತುವೆ ಈಗಾಗಲೇ ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿಯುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಐಗೂರು ಗ್ರಾಮದಿಂದ ಕಾಜೂರು ಸಂಪರ್ಕಿಸುವ ಶ್ರೀ ಪಾಷಾಣಮೂರ್ತಿ ದೇವಾಲಯದ ಮುಂಭಾಗ ೧೯೮೦ರಲ್ಲಿ ನಿರ್ಮಿಸಲಾಗಿರುವ ಸೇತುವೆ ಇದೀಗ ಶಿಥಿಲಾವಸ್ಥೆಗೆ ತಲುಪಿದೆ. ಸೇತುವೆಯ ತಳಭಾಗದಲ್ಲಿ ಅಳವಡಿಸಿರುವ ಅಡಿಪಾಯದ ಹಲವಷ್ಟು ಕಲ್ಲುಗಳು ಈಗಾಗಲೇ ಕೊಚ್ಚಿಕೊಂಡು ಹೋಗಿವೆ.
ಕಾವೇರಿ ನೀರಾವರಿ ನಿಗಮದ ಮೂಲಕ ೧೯೮೦ರಲ್ಲಿ ನಿರ್ಮಿಸಿರುವ ಈ ಸೇತುವೆಯ ಕಾಂಕ್ರೀಟ್ ಛಾವಣಿಯಲ್ಲಿ ಈಗಾಗಲೇ ಸಿಮೆಂಟ್ ಕಿತ್ತುಬಂದಿದ್ದು, ಕಬ್ಬಿಣದ ಸರಳುಗಳು ತುಕ್ಕು ಹಿಡಿಯುತ್ತಿವೆ. ಪಿಲ್ಲರ್‌ಗಳು ಈಗಲೋ ಆಗಲೋ ಎಂಬAತಿವೆ. ಭಾರೀ ವಾಹನಗಳು ಇದರ ಮೇಲೆ ಸಂಚರಿಸಿದರೆ ಸೇತುವೆ ಕುಸಿಯುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯರಾದ ಮಚ್ಚಂಡ ಅಶೋಕ್ ಹೇಳಿದ್ದಾರೆ.
ಸೇತುವೆಯ ಮೇಲ್ಭಾಗದಲ್ಲಿ ನಿರ್ಮಿಸಿದ್ದ ಪಿಲ್ಲರ್‌ಗಳು ಈಗಾಗಲೇ ಕಿತ್ತುಬಂದಿದ್ದು, ಕಬ್ಬಿಣದ ಸರಳುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಐಗೂರು ಚೋರನ ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆಯ ತಳಭಾಗದಲ್ಲಿ ನೀರಿನ ಹರಿವಿಗೆ ಕಲ್ಲುಗಳು ಕಿತ್ತುಬಂದಿವೆ. ಇದರ ಮೇಲೆ ಟಿಂಬರ್ ಲಾರಿಗಳು ಸೇರಿದಂತೆ ಅಧಿಕ ಭಾರದ ಸರಕು ಸಾಗಾಣಿಕೆಯ ವಾಹನಗಳು ಚಲಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ದಿನಂಪ್ರತಿ ಈ ಸೇತುವೆಯ ಮೇಲೆ ನೂರಾರು ವಾಹನಗಳು ಚಲಿಸುತ್ತಿವೆ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಸೇತುವೆಯನ್ನು ತಕ್ಷಣ ಸಂಬAಧಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಪರಿಶೀಲನೆ ನಡೆಸಿ, ದುರಸ್ತಿ ಕಾರ್ಯ ಕೈಗೊಳ್ಳಬೇಕು. ನಿರ್ಲಕ್ಷö್ಯ ಮುಂದುವರೆದು ಅನಾಹುತ ಸಂಭವಿಸಿದರೆ ಅವರುಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಸ್ಥಳೀಯರಾದ ಅಶೋಕ್, ಲವಕುಮಾರ್, ಗಣೇಶ್, ದಿನೇಶ್ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.