ಸುಂಟಿಕೊಪ್ಪ, ಸೆ. ೪: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ನೀಲ ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ಆಗಮಿಸಿ ತೋಟದಲ್ಲಿ ಬೆಳೆದ ಕೃಷಿ ಫಸಲನ್ನು ತಿಂದು, ಕಾಫಿ ಗಿಡಗಳನ್ನು ತುಳಿದು ನಾಶಗೊಳಿಸಿವೆ.

ಕಲ್ಲೂರು ಗ್ರಾಮ ಎ.ಕೆ ಸುರೇಶ ಎಂಬವರ ತೋಟಕ್ಕೆ ಆಗಮಿಸಿದ ಆನೆಗಳ ಹಿಂಡು ಅಂದಾಜು ಅರ್ಧ ಎಕರೆ ಜಾಗದ ಕಾಫಿ ಗಿಡಗಳನ್ನು ಕಿತ್ತು ತುಳಿದು ನಾಶಪಡಿಸಿದ ಪರಿಣಾಮ ಸುಮಾರು ೬೦ ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಅಲ್ಲದೆ ಇವರ ತೋಟದ ಸಮೀಪದ ಲಾಂಛನ, ಸತೀಶ, ನಾಣಯ್ಯ, ಎಂ.ಎನ್. ಲಿಂಗರಾಜಪ್ಪ ಅವರ ತೋಟವನ್ನು ನಾಶಪಡಿಸಿದೆ ಎಂದು ತಿಳಿಸಿದ್ದಾರೆ. ಕಳೆದ ೨೦ ದಿನಗಳ ಹಿಂದೆ ನಾಕೂರು, ಕಲ್ಲೂರು ಗ್ರಾಮಗಳಿಂದ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿರುವುದು ಬೆಳೆಗಾರರು ಬೆಳೆದ ಫಸಲು ಆನೆಗಳ ಹಾವಳಿಯಿಂದ ನಾಶಗೊಳ್ಳಲಿದೆ. ಸಣ್ಣ ಕಾಫಿ ಬೆಳೆಗಾರರು ಜೀವನ ನಿರ್ವಹಿಸಲು ಇನ್ನಿಲ್ಲದ ಕಷ್ಟ ಅನುಭವಿಸುವಂತಾಗಿದೆ ಎಂದು ಬೆಳೆಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ದಿನನಿತ್ಯ ರಾತ್ರಿ ವೇಳೆ ಕಾಡಿನಿಂದ ಬರುವ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ಬರುತ್ತಿದ್ದು ಅರಣ್ಯ ಇಲಾಖೆಯವರು ಕಾಫಿ ತೋಟದಲ್ಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟುವಂತೆ ಕಲ್ಲೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.