ಸೋಮವಾರಪೇಟೆ, ಸೆ. ೪: ಭಾರೀ ಮಳೆಯಿಂದಾಗಿ ಕಾಫಿ ಮತ್ತು ಕರಿ ಮೆಣಸು ಫಸಲಿಗೆ ಹಾನಿಯಾಗಿದ್ದು, ಕೂಡಲೇ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕು ಕಾಫಿ ಬೆಳೆಗಾರರ ಸಂಘವು ಭಾರತೀಯ ಕಾಫಿ ಮಂಡಳಿಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ಹಿಂದಿನ ಸಾಲಿಗಿಂತಲೂ ಈ ಬಾರಿ ತಾಲೂಕಿನೆಲ್ಲೆಡೆ ಹೆಚ್ಚಿನ ಮಳೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಮತ್ತು ಕಾಳುಮೆಣಸಿನ ಫಸಲಿಗೆ ಹಾನಿಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕಾಫಿ ಹೂ ಅರಳುವ ಸಂದರ್ಭದಲ್ಲೂ ಮಳೆ ಹೆಚ್ಚಾಗಿ ಬಿದ್ದ ಪರಿಣಾಮ ಫಸಲಿಗೆ ಹಾನಿಯಾಗಿದೆ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಹೇಳಿದ್ದಾರೆ. ಈಗಾಗಲೇ ಶೇ. ೫೦ ರಷ್ಟು ಕಾಫಿ ಮತ್ತು ಶೇ. ೬೦ರಷ್ಟು ಕರಿಮೆಣಸು ಫಸಲಿಗೆ ಹಾನಿಯಾಗಿದೆ. ಆದರೆ ಸರ್ಕಾರಕ್ಕೆ ಅಧಿಕಾರಿಗಳು ಸರಿಯಾಗಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡದಿರುವುದರಿಂದ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ನಷ್ಟವಾಗಿರುವ ಸ್ಥಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕು. ಬೆಳೆಗಾರರಿಗೆ ಪರಿಹಾರ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.