ಸೆಪ್ಟೆಂಬರ್ ೫ ಮಾಜಿ ರಾಷ್ಟçಪತಿ, ಶ್ರೇಷ್ಠ ತತ್ವಜ್ಞಾನಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಅಂದು ಶಿಕ್ಷಕರ ದಿನಾಚರಣೆ ಎಂದು ಆಚರಿಸುವರು. ನಮ್ಮ ಸಮಾಜದಲ್ಲಿ ಅನೇಕ ಯಶಸ್ಸಿನ ವ್ಯಕ್ತಿಗಳಿರುವರು. ಅದಕ್ಕೆಲ್ಲ ವಿದ್ಯೆ ಕಲಿಸಿದ ಗುರುಗಳೇ ಕಾರಣ. ನಾಳಿನ ನಮ್ಮ ಭವಿಷ್ಯವನ್ನು ರೂಪಿಸುವ ಏಕೈಕ ವ್ಯಕ್ತಿ ಎಂದರೆ ಗುರುಗಳು. ಆದರಿಂದಲೇ ಗುರುವನ್ನು ‘ಆಚಾರ್ಯ ದೇವೋಭವ’ ಎನ್ನುವರು. ಗುರುಗಳು ಮಕ್ಕಳ ಕಲಿಕೆಗಾಗಿ ಅವರ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಬೆತ್ತದ ರುಚಿ ತೋರಿಸಿ ಅವರನ್ನು ತಿದ್ದಿ ತೀಡಿ ಅವರ ಬದುಕನ್ನು ಹಸನಾಗಿಸಲು ಪ್ರಯತ್ನ ಪಡುವರು.
ನಾವು ಇಂದು ಅಕ್ಷರವನ್ನು ಕಲಿತಿರುವೆವು. ಅದಕ್ಕೆ ಮೊದಲ ಕಾರಣ ಗುರುಗಳು. ನಾವು ಮನೆಯಲ್ಲಿ ಅಮ್ಮನಿಂದ ಅಕ್ಷರ ಕಲಿತರೂ ಗುರುಗಳಿಂದ ವಿದ್ಯೆ ಕಲಿಯಲೇಬೇಕು. ಪ್ರತೀ ಪುರುಷನ ಹಿಂದೆ, ಅವನ ಯಶಸ್ಸಿಗೆ ಕಾರಣ ವಾಗಿ ಮಹಿಳೆ ಇರುವಳೆನ್ನುವರು. ಆದರೆ ಅವರ ಯಶಸ್ಸಿನ ಹಿಂದೆ ಬೆನ್ನೆಲುಬಾಗಿ ಉಪಾಧ್ಯಾಯರುಗಳು ಇರುವರೆಂಬುದನ್ನು ಯಾರೂ ಮರೆಯಬಾರದು. ನಾವೆಷ್ಟೇ ಕಲಿತರೂ ಗುರುಗಳಿಲ್ಲದ ವಿದ್ಯೆ ಪರಿಪೂರ್ಣವಾಗದು.
ಗುರು-ಶಿಷ್ಯರ ಬಾಂಧವ್ಯಕ್ಕೆ ವಯಸ್ಸಿನ ಅಂತರವಿಲ್ಲ. ಜಾತಿಯ ಅಂತರವಿಲ್ಲ. ವಿದ್ಯಾರ್ಥಿಗಳು ಸಮಾಜಕ್ಕೆ ಆಧಾರಸ್ತಂಭವಾದರೆ ಆ ಸ್ತಂಭಗಳನ್ನು ಕಟ್ಟುವುದು ಉಪಾಧ್ಯಾ ಯರುಗಳು. ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಹೋಗದೆ ತಿದ್ದಿ ಬೆಳೆಸುವವರು. ತಂದೆ-ತಾಯಿಗಳು ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂದು ಅಕ್ಷರಾಭ್ಯಾಸ ಮಾಡಿಸುವರು. ಗುರುಗಳು ತಮ್ಮ ಜ್ಞಾನಶಕ್ತಿಯಿಂದ ಸಾಹಿತ್ಯದಲ್ಲಿ ಪಂಪ, ರನ್ನ, ಹೊನ್ನ, ಶೇಕ್ಸ್ಫಿಯರ್ನಂತೆ ಮಾರ್ಪಾಡು ಆಗುವಂತೆ ಮಾಡುವರು. ಪಾಠದ ಮೂಲಕ ಅದರಲ್ಲಿರುವ ಸಾರವನ್ನು ಮಕ್ಕಳ ಮೆದುಳಿಗೆ ತುಂಬಿ ಮಕ್ಕಳಿಗೆ ಸಮಾಜದ ಆಗುಹೋಗುಗಳನ್ನು ಪರಿಚಯಿಸುವರು. ಇದರಿಂದ ಶಿಷ್ಯ ಮತ್ತು ಗುರುಗಳ ಬಾಂಧವ್ಯ ಗಟ್ಟಿಯಾಗಿ ಬೆಳೆಯುವುದು. ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಅವರು ಮುನ್ನಡೆಯಲು ಧೈರ್ಯ, ಸೈರ್ಯ, ಶಿಸ್ತನ್ನು ತುಂಬುವರು.
ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿದರೂ ಅವರ ಉದ್ದೇಶ ಮಾತ್ರ ಶಿಷ್ಯರ ಏಳಿಗೆ ಮತ್ತು ಅಭಿವೃದ್ಧಿಯೇ ಆಗಿರುತ್ತದೆ. ಮಕ್ಕಳ ನಾಳಿನ ಭವಿಷ್ಯ ನಿರ್ಮಿಸುವ ರುವಾರಿ ಗುರುಗಳದೇ ಆಗಿರುತ್ತದೆ. ರಾಮಕೃಷ್ಣ ಪರಮ ಹಂಸರು ಮತ್ತು ಸ್ವಾಮಿ ವಿವೇಕಾ ನಂದರು ಉತ್ತಮ ಗುರು-ಶಿಷ್ಯರು. ವಿವೇಕಾನಂದರು ಗುರುವಾಕ್ಯವನ್ನು ಪಾಲಿಸುತ್ತಿದ್ದರು. ಅವರು ವೇದಾಂತ ಪ್ರಚಾರ ಮಾಡುತ್ತಾ, ರಾಮಕೃಷ್ಣ ಮಠ, ಸೇವಾ ಸಂಘವನ್ನು ದೇಶ - ವಿದೇಶದಲ್ಲಿ ಸ್ಥಾಪಿಸಿದರು. ಇವರು ಗುರು-ಶಿಷ್ಯರ ಬಾಂಧವ್ಯ ಪ್ರಸಿದ್ಧವಾಯಿತು. ವಿದ್ಯೆ ಇಲ್ಲದವ ಪ್ರಾಣಿಗಿಂತ ಕಡೆ ಎನ್ನುವ ಮಾತಿದೆ. ಮಾನವನ ಬದುಕಲ್ಲಿ ಶಾಲೆ, ವಿದ್ಯೆ ಅತ್ಯಗತ್ಯ. ಮನುಷ್ಯನಿಗೆ ಜ್ಞಾನ ನೀಡಿ ಉತ್ತಮರನ್ನಾಗಿ ಮಾರ್ಪಡಿಸುವುದು ಶಾಲೆಯೇ. ಶಾಲೆಯೇ ದೇವಾಲಯ. ಬೋಧಿಸುವ ಗುರುವೇ ದೇವರು. ಅವರನ್ನು ಗೌರವಿಸಲು ಮರೆಯಬಾರದು. ಸೂಕ್ತ ಸಮಯದಲ್ಲಿ ಗುರುಗಳ ಮಾರ್ಗದರ್ಶನದಿಂದ ಉನ್ನತ ಸ್ಥಿತಿಗೆ ತಲುಪಬಹುದು. ಅಂತಹ ಗುರುವಿನ ಮಹತ್ವ ಎಂತದ್ದೆAದು ಶಿಕ್ಷಕರ ದಿನದಂದು ನೆನಪಿಸಿಕೊಳ್ಳಬೇಕು. ಅಕ್ಷರ ಜ್ಞಾನವೇ ಮಹಾಜ್ಞಾನ. ತಪ್ಪುದಾರಿ ಹಿಡಿಯುವವರನ್ನು ತಿದ್ದಿ ಅವರಿಗೆ ಶಿಕ್ಷೆ ವಿಧಿಸಿ ಸರಿ ದಾರಿಗೆ ತರಲು ಪ್ರಯತ್ನಿಸುವ ಗುರುಗಳನ್ನೆಂದೂ ಮರೆಯಬಾರದು. ಗುರುವಿನ ಸೇವೆಗೆ ಬೆಲೆಕಟ್ಟಲಾಗದು. ಯಾವ ಗುರುದಕ್ಷಿಣೆ ಕೊಟ್ಟರೂ ಕಡಿಮೆಯೇ. ಅಂತಹ ಗುರುಗಳಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ.
ಡಾ. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಆಚರಿಸಲು ಅನುಮತಿ ಕೇಳಿದಾಗ ಅವರು ನನ್ನ ಹುಟ್ಟಿನ ದಿನ ಆಚರಿಸಬೇಕಿಲ್ಲ. ಅದನ್ನು ಶಿಕ್ಷಕರ ದಿನವೆಂದು ಆಚರಿಸಿ, ಅದೇ ನನಗೆ ಹೆಮ್ಮೆ ಎಂದರAತೆ. ಅದರಂತೆ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ.
ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಕರು ನೆನಪಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ ಎಲ್ಲಾ ವಿದ್ಯಾರ್ಥಿ ಗಳೂ ತಮಗೆ ಕಲಿಸಿದ ಗುರುವಿನ ನೆನಪನ್ನು ಸದಾ ಹಸಿರಾಗಿಟ್ಟುಕೊಳ್ಳ ಬಹುದು.
ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ವಿದ್ಯಾಭ್ಯಾಸ ಪಡೆದ ಪ್ರತಿ ಯೊಬ್ಬರ ಕರ್ತವ್ಯ. ಶಿಕ್ಷಕರ ದಿನದಂದು ವಿದ್ಯೆ ಕಲಿಸಿದ ಗುರುಗಳಿಗೆ ಎಲ್ಲರೂ ಅನಂತಾ ನಂತ ವಂದನೆ ಸಲ್ಲಿಸೋಣ.
- ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ, ಟಿ. ಶೆಟ್ಟಿಗೇರಿ.