ಡಾ. ಸರ್ವೇಪಲ್ಲಿ ರಾಧಾಕೃಷ್ಣರು ದೇಶಕಂಡ ಶ್ರೇಷ್ಠ ಶಿಕ್ಷಕರು. ಇವರು ಖ್ಯಾತ ತತ್ವಶಾಸ್ತçಜ್ಞರಾಗಿದ್ದರು. ಶಿಕ್ಷಣ ಕ್ಷೇತ್ರದ ಮಹತ್ವದ ಕುರಿತು ಜನರಿಗೆ ಅರಿವು ಮೂಡಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. ಅವರಿಂದ ದೊರೆತಂತಹ ಗೌರವ ಗುರು ವೃಂದಕ್ಕೆ ಈ ಶಿಕ್ಷಕ ದಿನಾಚರಣೆ ಎಂದು ಹೇಳಲು ಹೆಮ್ಮೆಯಾಗುತ್ತದೆ.

ಜೀವನದಲ್ಲಿ ಈಸಬೇಕು, ಇದ್ದು ಜಯಿಸಬೇಕು. ಇದಕ್ಕೆ ಶಿಕ್ಷಕರ ಮಾರ್ಗದರ್ಶನ ಬೇಕೇ ಬೇಕು. ಹೆಸರೇ ಸೂಚಿಸುವಂತೆ ಶಿಕ್ಷಕ ಎಂದರೆ, ಶಿ-ಶಿಸ್ತು, ಕ್ಷ-ಕ್ಷಮೆ, ಕ-ಕರುಣೆ.

ಒಂದೆಡೆ ಮಹಾತ್ಮಾ ಗಾಂಧೀಜಿಯವರು ಹೇಳಿದ್ದು, ಹೀಗೆ, ವಿದ್ಯಾರ್ಥಿ ಜೀವನ ಚೀಲದಲ್ಲಿ ತುಂಬಿಟ್ಟ ಭತ್ತದಂತಿರಬಾರದು. ಭತ್ತ ಬೆಳೆಯುವ ಗದ್ದೆಗಳಾಗಬೇಕು ಎಂದು. ಕಲಿಕೆಯನ್ನು ಕಳೆಯಬಾರದು ಕೂಡಬೇಕು, ಹಂಚಬೇಕು, ವೃದ್ಧಿಸಬೇಕು. ಇದು ಮಹಾತ್ಮರ ಅಭಿಪ್ರಾಯವಾಗಿತ್ತು.

ಈಗ ಶಿಕ್ಷಕರ ಪರಿಸ್ಥಿತಿಯು ಅದೇ ಆಗಿದೆ. ಜ್ಞಾನದ ‘ಕಣಜ’ವಾಗಿರುವ ಶಿಕ್ಷಕರು ತನ್ನಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿದಾಗ ಮಾತ್ರ ಉತ್ತಮ ದೇಶದ ನಿರ್ಮಾತೃಗಳಾಗಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಆ ಭಾಗ್ಯವು ಇಲ್ಲದೆ ನಿಂತ ನೀರಿನಂತಾಗಿದೆ. ಆದರೆ ಶಿಕ್ಷಣ ವ್ಯವಸ್ಥೆ ವ್ಯಾಪಕವಾಗಿ ಹರಡಿದರೆ ಮಾತ್ರ ಒಳ್ಳೆಯ ಭವಿಷ್ಯ ಕಾಣಬಹುದು. ಅದರಿಂದಾಗಿ ಜನರು ಚಿಕ್ಕ ವಯಸ್ಸಿನಿಂದ ಶುದ್ಧ, ಚಾರಿತ್ರö್ಯ, ದೈವಭಯ ಮತ್ತು ಪರಸ್ಪರ ಪ್ರೀತಿ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ.

ಸಜ್ಜನ ವ್ಯಕ್ತಿತ್ವ ಬೆಳೆಸಿಕೊಂಡು, ಮಕ್ಕಳ ಶೈಕ್ಷಣಿಕ ಏಳಿಗೆಗೆ ಶ್ರಮಿಸಿ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣವನ್ನು ನೀಡಿ, ಸೃಜನಶೀಲರನ್ನಾಗಿ ಮಾಡಿ ಸಹೋದರತ್ವ ಭಾವನೆಯನ್ನು ಮೂಡಿಸಿ ಶಿಕ್ಷಣ ಸೇವೆಯಲ್ಲಿ ನಿಷ್ಠಾವಂತರಾಗಿ ಶಿಸ್ತು, ಸಂಯಮ ಪಾಲಿಸಿ ಕರ್ತವ್ಯಕ್ಕೆ ಪ್ರಾಮಾಣಿಕರಾಗಿ ಕಾರ್ಯದಲ್ಲಿ ಕ್ರಿಯಾಶೀಲರಾಗಿ ಸರ್ವ ವಿದ್ಯಾರ್ಥಿಗಳನ್ನು ನಿಷ್ಪಕ್ಷಪಾತರಾಗಿ ಪ್ರೀತಿಯಿಂದ ಕಾಣುವವರು ಶಿಕ್ಷಕರು.

ಶಿಸ್ತುಗಾರನಾಗಿ ವಿದ್ಯಾರ್ಥಿಗಳ ಜ್ಞಾನದಾಹಕ್ಕೆ ತಕ್ಕಂತೆ ಕ್ಷಣ ಕ್ಷಣಕ್ಕೂ ಉಲ್ಲಾಸಭರಿತನಾಗಿ ಕಠಿಣವಾದುದ್ದನ್ನು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಬಿಡದೇ ಪಠಿಸುವವನೇ ಶಿಕ್ಷಕ. ಮುದ್ದು ಮಕ್ಕಳ ಮನಸ್ಸನ್ನು ಅರಿತು ಅವರನ್ನು ಪ್ರಗತಿಯೆಡೆಗೆ ಕೊಂಡೊಯ್ಯಬಲ್ಲ ಏಕೈಕ ನೇತಾರನೆ ಶಿಕ್ಷಕ.

ಕೊಂಬೆ ಮೇಲೆ ಕುಳಿತ ಪಕ್ಷಿ ನಂಬಿರುವುದು ತನ್ನ ರೆಕ್ಕೆಯನ್ನೇ ಹೊರತು ಕೊಂಬೆಯನ್ನಲ್ಲ. ಹಾಗೆ ನಾವು ಸಹ ತಮ್ಮ ಸ್ವಂತ ಸಾಮರ್ಥ್ಯದಿಂದ ಮುಂದೆ ಬರಬೇಕೆಂದು ತಿಳಿಸಿಕೊಟ್ಟವರು ಶಿಕ್ಷಕರು.

ವಿದ್ಯಾರ್ಥಿ ಜೀವನ ಅನ್ನೋದು ಒಂದು ಸುಂದರ ಪಯಣ. ಬಾಲ್ಯದ ಮುಗ್ಧ ಕನಸು ಕಮರಿ ಹೋಗದಂತೆ ಪ್ರೇರೆಪಿಸುತ್ತಾ ಮುಂದೆ ಭವಿಷ್ಯದಲ್ಲಿ ಹೂದೋಟದಲ್ಲಿರುವ ಹೂವಿನಂತೆ ನಗುತ್ತಿರಿ ಎಂದು ಉತ್ತೇಜನ ನೀಡುತ್ತಾ ಮುಕ್ತ ವಾತಾವರಣ ಮೂಡುವ ತನಕ ಕಾಲಕಳೆಯುವಂತೆ ಪ್ರೋತ್ಸಾಹಿಸೋಣ. ದೈನಂದಿನ ಆಹಾರ ಕ್ರಮದ ಜೊತೆಗೆ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತೆ ವ್ಯಾಯಾಮವನ್ನು ಮಾಡುತ್ತಾ, ಸದೃಢರನ್ನಾಗಿ ರೂಪಿಸಿಕೊಳ್ಳುವಂತೆ ಪ್ರೇರೇಪಿಸೋಣ. - ವಸಂತಿ ರವೀಂದ್ರ, ಸೋಮವಾರಪೇಟೆ.