ಕಣಿವೆ, ಸೆ. ೪: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕೆರೆಯಿಂದ ಚಿಕ್ಕತ್ತೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಜನವಸತಿ ಪ್ರದೇಶದಲ್ಲಿ ಪಂಚಾಯಿತಿ ನಿರ್ಮಿತ ಕುಡಿಯುವ ನೀರಿನ ಸಂಗ್ರಹಣಾ ತೊಟ್ಟಿ ಅಶುಚಿತ್ವದಿಂದ ಕೂಡಿದೆ. ಕಸ ತ್ಯಾಜ್ಯಗಳಿಂದ ಕೂಡಿದ್ದು, ಮಕ್ಕಳು ಹಾಗೂ ಮಹಿಳೆಯರು ಮೂಗು ಮುಚ್ಚಿಕೊಂಡೇ ಇಲ್ಲಿ ಕುಡಿಯುವ ನೀರು ಸಂಗ್ರಹಿಸುತ್ತಿದ್ದಾರೆ. ಈ ತೊಟ್ಟಿಯ ಸುತ್ತಲೂ ಕಾಡು ಗಿಡಗಂಟಿಗಳು ಬೆಳೆದಿರುವುದು ಒಂದೆಡೆಯಾದರೆ, ತೊಟ್ಟಿಯ ಸುತ್ತಲೂ ಗುಂಡಿಗಳು ನಿರ್ಮಾಣಗೊಂಡು ಅದರೊಳಗೆ ತ್ಯಾಜ್ಯ ನೀರು ನಿಂತು ಪಾಚಿ ಕಟ್ಟಿ, ಸೊಳ್ಳೆಗಳ ಉತ್ಪಾದನೆಯ ತಾಣವಾಗಿವೆೆ. ಇದರಿಂದ ನೀರು ಕಲುಷಿತಗೊಂಡಿದ್ದು, ಈ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸುವಂತೆ ಪಂಚಾಯಿತಿಯ ಸದಸ್ಯರು, ಅಧ್ಯಕ್ಷರು ಹಾಗೂ ಪಿಡಿಒಗಳ ಗಮನಕ್ಕೆ ತಂದರೂನು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಗ್ರಾಮೀಣ ಜನರಿಗೆ ಕಾಲರಾ, ಡೆಂಗ್ಯೂ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಬಾಧಿಸುವ ಮುನ್ನಾ ಪಂಚಾಯಿತಿಯವರು ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.