ಗೋಣಿಕೊಪ್ಪ ವರದಿ, ಸೆ. ೫: ಅರಿಶಿಣ ಗಣೇಶಮೂರ್ತಿ ತಯಾರಿಸುವ ವಿಶ್ವ ದಾಖಲೆಯ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶಿಕ್ಷಣ ಇಲಾಖೆ ವೀರಾಜಪೇಟೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಹೇಳಿದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಗೌರಿ ಗಣೇಶ ಹಬ್ಬ ಪ್ರಯುಕ್ತ ಪರಿಸರ ಸ್ನೇಹಿ ಅರಿಶಿಣ ಗಣೇಶೋತ್ಸವ ಜಾಗೃತಿ ಅಭಿಯಾನ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ, ಗಣೇಶ ಚತುರ್ಥಿ ಸಂದರ್ಭ ಅರಿಶಿಣ ಮತ್ತಿತರ ಪರಿಸರ ಸ್ನೇಹಿ ವಸ್ತು ಬಳಕೆ ಮಾಡಿಕೊಂಡು ಅರಿಶಿಣದಿಂದ ಗಣೇಶ ಮೂರ್ತಿ ತಯಾರಿಸಬೇಕಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ೧೦ ಲಕ್ಷ ಅರಿಶಿಣ ಗಣೇಶ ಮೂರ್ತಿ ತಯಾರಿಸುವ ವಿಶ್ವ ದಾಖಲೆಯ ಗುರಿ ಇಟ್ಟುಕೊಂಡಿದೆ. ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಶಿಕ್ಷಕರು ಇಕೋ ಕ್ಲಬ್, ಶಾಲಾಭಿವೃದ್ಧಿ ಸಮಿತಿಗಳ ಮೂಲಕ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿ ತಯಾರಿಸಲು ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಹಾಗೂ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಅಕ್ಷರ ದಾಸೋಹ ವಿಭಾಗದ ಶಿಕ್ಷಣಾಧಿಕಾರಿ ಹಸೀನಾ ಬಾನು ಅರಿಶಿಣ ಗಣೇಶೋತ್ಸವ ಭಿತ್ತಿಪತ್ರ ಹಾಗೂ ಸ್ಟಿಕರ್ ಬಿಡುಗಡೆಗೊಳಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೈಸಿ ಜೋಸೆಫ್, ಸಿ.ಆರ್.ಪಿ. ವಿ.ಟಿ. ವೆಂಕಟೇಶ್, ಕ್ಷೀರ ಭಾಗ್ಯ ಯೋಜನೆಯ ಜಿಲ್ಲಾ ಸಹಾಯಕ ನಿರ್ದೇಶಕ ಕೃಷ್ಣಪ್ಪ, ತಾಲೂಕು ಸಹಾಯಕ ನಿರ್ದೇಶಕ ರಾಜೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯಿತ್ರಿ, ವಿಷಯ ಪರಿವೀಕ್ಷಕಿ ಬಿಂದು, ಬಿ.ಆರ್.ಪಿ. ಬಿ.ಪಿ. ಉತ್ತಪ್ಪ ಇದ್ದರು.