ನಾಪೋಕ್ಲು, ಸೆ. ೫: ಸಮಸ್ಯೆಗಳಿಗೂ ನಾಪೋಕ್ಲು ಪೊಲೀಸರಿಗೂ ಬಿಡಿಸಲಾರದ ನಂಟು. ವಸತಿ, ನೀರು, ಮೊದಲಾದ ಸಮಸ್ಯೆಗಳು ಒಂದರ ಹಿಂದೆ ಒಂದರAತೆ ಇವರನ್ನು ಕಾಡುತ್ತಲೇ ಇವೆ. ಸಮಸ್ಯೆಗಳ ನಡುವೆ ವರ್ಷಗಳು ಹಲವು ಕಳೆದರೂ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗದಿ ರುವದು ಮಾತ್ರ ವಿಪರ್ಯಾಸ.

ಇದೀಗ ಠಾಣಾಧಿಕಾರಿಗೆ ಮೀಸಲಾಗಿರುವ ವಸತಿ ಗೃಹ ಕಾಡು ಪಾಲಾಗುತ್ತಿದ್ದು, ಕಳೆದ ೯ ವರ್ಷದಿಂದ ಯಾವ ಅಧಿಕಾರಿಯೂ ಇದರಲ್ಲಿ ವಾಸಿಸಲು ಸಾಧ್ಯವಾಗದೆ ಬಾಡಿಗೆ ಮನೆಯಲ್ಲಿ ವಾಸಿಸು ವಂತಾಗಿದೆ. ಈ ವ್ಯಾಪ್ತಿಯ ಐದು ಗ್ರಾಮ ಪಂಚಾಯಿತಿಯ ೨೭ ಗ್ರಾಮ ಗಳು ಈ ಠಾಣೆಗೆ ಒಳಪಡುತ್ತದೆ. ಇಲ್ಲಿ ವಾಹನ ಚಾಲಕ ಸೇರಿದಂತೆ ೨೯ ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬ್ರಿಟೀಷರ ಕಾಲದಲ್ಲಿ ನಾಪೋಕ್ಲುವಿನ ಪೊಲೀಸ್ ಠಾಣೆ ಸೇರಿದಂತೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನೂತನ ಪೊಲೀಸ್ ಠಾಣೆ ಹಾಗೂ ೧೨ ಸಿಬ್ಬಂದಿಗಳಿಗೆ ವಾಸಿಸಲು ಯೋಗ್ಯವಾದ ವಸತಿ ಗೃಹಗಳ ನಿರ್ಮಾಣ ಕೈಗೊಳ್ಳಲಾಯಿತು. ಉಳಿದ ಸಿಬ್ಬಂದಿಗಳು ಕುಸಿಯುವ ಹಂತದಲ್ಲಿರುವ ಹಳೇ ವಸತಿಗೃಹದಲ್ಲಿ ದಿನಕಳೆಯುವ ಪರಿಸ್ಥಿತಿ ಎದುರಾಗಿದೆ.

ಹಳೇ ಎಸ್.ಐ ವಸತಿ ಗೃಹವನ್ನು ಕೆಡವಿ ಎರಡು ಅಥವಾ ಮೂರಂತಸ್ಥಿ ನಲ್ಲಿ ನೂತನ ಕಟ್ಟಡ ನಿರ್ಮಿಸಿದರೆ ಅಧಿಕಾರಿಗಳಿಗೆ ಹಾಗೂ ಉಳಿದ ಸಿಬ್ಬಂದಿಗಳಿಗೆ ವಾಸಿಸಲು ವ್ಯವಸ್ಥಿತ ವಸತಿ ಗೃಹ ದೊರೆತು ಅವರ ಸಮಸ್ಯೆಗಳಿಗೂ ಪರಿಹಾರ ನೀಡಿದಂತಾಗುತ್ತದೆ.

ಬ್ರಿಟೀಷರ ಕಾಲದಲ್ಲಿ ಪೊಲೀಸ್ ಅಧಿಕಾರಿಯ ಓಡಾಟದ ಕುದುರೆಯನ್ನು ಕಟ್ಟಲು ಎಸ್.ಐ ವಸತಿ ಗೃಹದ ಬಳಿ ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು. ಇದು ಕೂಡ ಈಗ ಸಂಪೂರ್ಣ ನೆಲಕಚ್ಚಿದೆ. ಈ ಜಾಗದಲ್ಲಿಯೂ ನೂತನ ಕಟ್ಟಡಕ್ಕೆ ವ್ಯವಸ್ಥೆ ಕಲ್ಪಿಸಬಹುದಾಗಿದೆ.

ಹಗಲಿರುಳು ಸಮಾಜದ ಹಿತ ಕಾಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿ ರುವ ಪೊಲೀಸರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವದು ಸರಕಾರದ ಜವಾಬ್ದಾರಿಯೂ ಆಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಪೊಲೀಸ್ ಉನ್ನತಾಧಿಕಾರಿ ಗಳು ಗಮನ ಹರಿಸಿದ್ದೇ ಆದಲ್ಲಿ ಸಿಬ್ಬಂದಿಯ ನೇಮಕ, ಸಿಬ್ಬಂದಿ ವಸತಿ ಗೃಹದ ಜೊತೆಯಲ್ಲಿ ಉಳಿದ ವಸತಿ ಗೃಹಗಳನ್ನು ನಿರ್ಮಿಸಲು ಕಾರ್ಯಕೈಗೊಳ್ಳಬಹುದಾಗಿದೆ ಎಂಬದು ನಾಗರಿಕರ ಆಶಯ.

-ಪಿ.ವಿ. ಪ್ರಭಾಕರ್